ಹಾಸನ:ಮಾಜಿ ಪ್ರಧಾನಿ ದೇವೇಗೌಡ ಕುಟುಂಬದ ಭದ್ರಕೋಟೆ ಎನಿಸಿಕೊಂಡಿರುವ ಹಾಸನ ಇಂದು ಅದೇ ಕುಟುಂಬದ ವಿರುದ್ಧ ಸಾವಿರಾರು ಜನರು ಸೇರಿ ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯಿತು. ಲೈಂಗಿಕ ಪ್ರಕರಣವನ್ನು ಖಂಡಿಸಿ ಹಾಗೂ ಲೈಂಗಿಕ ಸಂತ್ರಸ್ತೆಯರ ಜತೆಗೆ ನಾವಿದ್ದೇವೆ ಎಂಬ ಸಂದೇಶವನ್ನು ಸಾರಲು ಗುರುವಾರ ಕರ್ನಾಟಕ ಜನಪರ ಚಳವಳಿ ಒಕ್ಕೂಟದ ವತಿಯಿಂದ ರಾಜ್ಯದ ನೂರಾರು ಸಂಘಟನೆಗಳು ಒಗ್ಗೂಡಿ ನಮ್ಮ ಹೋರಾಟ ಹಾಸನದ ಕಡೆಗೆ ಎಂಬ ಶೀರ್ಷಿಕೆಯೊಂದಿಗೆ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಗುರುವಾರ ಬೆಳಗ್ಗೆ ಸಾವಿರಾರು ಸಂಖ್ಯೆಯಲ್ಲಿ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಎನ್.ಆರ್. ವೃತ್ತಯಿಂದ ಬಿಎಂ ರಸ್ತೆಯ ಮೂಲಕ ತಾಲೂಕು ಕಚೇರಿ ಪಕ್ಕದ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ಬೃಹತ್ ವೇದಿಕೆಗೆ ಆಗಮಿಸಿದರು. ಈ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣನ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ‘ಆತನನ್ನು ಬಂಧಿಸಬೇಕು. ಯಾವುದೇ ಕಾರಣಕ್ಕೂ ಈ ಪ್ರತಿಭಟನೆ ದಿಕ್ಕು ತಪ್ಪಬಾರದು. ನಿಷ್ಪಕ್ಷಪಾತ ತನಿಖೆ ನಡೆಸಿ ಆರೋಪಿಗೆ ಶಿಕ್ಷೆ ಆಗಬೇಕು ಮತ್ತು ಸಂತ್ರಸ್ತ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡಬೇಕು,’ ಎಂದು ಒತ್ತಾಯಿಸಿದರು.
ಮಾಜಿ ಸಂಸದೆ, ಹೋರಾಟಗಾರ್ತಿ ಸುಭಾಶಿನಿ ಅಲಿ ಮಾತನಾಡಿ, ಹಾಸನದ ಮಹಿಳೆಯರ ಮೇಲೆ ನಡೆದಿರುವ ದಬ್ಬಾಳಿಕೆಯನ್ನು ಖಂಡಿಸಲು ನಾವು ಇಂದು ಇಲ್ಲಿಗೆ ಬಂದಿದ್ದೇವೆ. ಮಹಾರಾಜ ಪಾರ್ಕ್‌ನಿಂದ ಹೋರಾಟ ಶುರು ಮಾಡಿದ್ದೇವೆ. ಹಿಂದೆ ಮಹಾರಾಜರ ಆಡಳಿತವಿತ್ತು. ಇದೀಗ ಪ್ರಜಾಪ್ರಭುತ್ವದಲ್ಲಿ ಮಹಾರಾಜನಂತರ ಮೆರೆಯುತ್ತಿರುವ ಪ್ರಜ್ವಲ್ ರೇವಣ್ಣ ವಿರುದ್ಧ ಮಹಾರಾಜ ಪಾರ್ಕ್‌ನಲ್ಲಿಯೇ ಹೋರಾಟ ಆರಂಭವಾಗಿದೆ ಎಂದು ಹೇಳಿದರು.
ಹಾಸನ ಲೈಂಗಿಕ ದೌರ್ಜನ್ಯದ ಕರ್ಮಕಾಂಡ ಇಡೀ ದೇಶದ ಮಹಿಳೆಯರಿಗೆ ಆಕ್ರೋಶ ಉಂಟು ಮಾಡಿದೆ. ಶತಮಾನಗಳಿಂದ ಮಹಿಳೆಯರು ಸಂಕಷ್ಟ ಎದುರಿಸುತ್ತಾ ಬಂದಿದ್ದಾರೆ. ಸಾಮಂತವಾದ, ಭಂಡವಾಳಶಾಯಿ ವ್ಯವಸ್ಥೆ, ಪುರುಷ ಪ್ರಧಾನ ಸಮಾಜದಲ್ಲಿ ಅತ್ಯಾಚಾರಗಳು ನಡೆಯುತ್ತಲೇ ಇವೆ. ಇಂತಹ ಅನಿಷ್ಟ ವ್ಯವಸ್ಥೆಯನ್ನು ನಾವು ಒಡೆಯಬೇಕಿದೆ. ಪ್ರಜ್ವಲ್ ರೇವಣ್ಣ, ಎಚ್.ಡಿ. ರೇವಣ್ಣ ಹಾಗೂ ಈ ಕೃತ್ಯದಲ್ಲಿ ಯಾರೆಲ್ಲಾ ಇದ್ದಾರೆ. ಅವರ‌್ಯಾರಿಗೂ ಬೇಲ್ ಸಿಗಬಾರದು. ಅವರಿಗೆ ಏನಿದ್ದರೂ ಜೈಲೇ ಆಗಬೇಕು. ತನಿಖೆಯಲ್ಲಿ ಅವರು ತಮ್ಮ ಪ್ರಭಾವ ಬೀರಬಹುದು. ಆದರೆ ರಾಜ್ಯ ಸರ್ಕಾರ ಈ ವಿಷಯದಲ್ಲಿ ಪ್ರಾಮಾಣಿಕವಾಗಿ ನಡೆದುಕೊಳ್ಳಬೇಕು ಎಂದು ತಿಳಿಸಿದರು.
ನಿಮ್ಮನ್ನು ನಾವು ಆಯ್ಕೆ ಮಾಡಿ ಕಳಿಸಿದ್ದು ಜನ ಸೇವೆಗಾಗಿ. ಆದರೆ ನೀವು ಮಹಿಳಾ ಅಧಿಕಾರಿಗಳು, ನಿಮ್ಮ ಪಕ್ಷದ ಕಾರ್ಯಕರ್ತೆಯರು, ಸಹಾಯ ಕೇಳಿಕೊಂಡು ಬರುವ ಯಾವ ಹೆಣ್ಣನ್ನು ಬಿಡದೆ ಬೋಗಿಸಿದ್ದೀರಿ. ತಾಯಿ ವಯಸ್ಸಿನವರನ್ನು ಬಿಟ್ಟಿಲ್ಲ. ಈ ಸಂತ್ರಸ್ತೆಯರಿಗೆ ಸರ್ಕಾರ ಪರಿಹಾರ ನೀಡಬೇಕು. ಅವರಿಗೆ ಜೀವನ ಭದ್ರತೆಯನ್ನು ನೀಡಬೇಕು. ಮಹಿಳೆಯರ ಅಸಹಾಯಕತೆ ಉಪಯೋಗಿಸಿಕೊಂಡು ಅವರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಸಂತ್ರಸ್ತೆಯರ ನಿಮ್ಮ ಜತೆ ನಾವಿದ್ದೇವೆ. ಅವರು ಯಾವುದೇ ತಪ್ಪು ಮಾಡಿಲ್ಲ. ಅಂಜದೆ ಸಮಾಜದಲ್ಲಿ ತಲೆ ಎತ್ತಿ ನಡೆಯಿರಿ. ನಿಮ್ಮೊಂದಿಗೆ ಈ ದೇಶದ ಮಹಿಳೆಯರು ಇದ್ದಾರೆ. ಅಮಾನವೀಯ ಈ ಘಟನೆಯ ವಿರುದ್ಧ ನಿರಂತರವಾಗಿ ಹೋರಾಡುತ್ತೇವೆ, ಸಂತ್ರಸ್ತೆಯರ ಜತೆಗೆ ನಾವಿದ್ದೇವೆ ಎಂದು ವಿಶ್ವಾಸ ತುಂಬಿಸಿದರು.
ಈ ಹತ್ತು ವರ್ಷಗಳ ಟ್ರೈಲರ್ ಅಷ್ಟೇ, ಸಿನಿಮಾ ಇನ್ನೂ ಇದೆ ಎಂದು ಕೇಂದ್ರ ಬಿಜೆಪಿ ಸರ್ಕಾರ ಹೇಳುತ್ತಿದೆ. ಟ್ರೈಲರೇ ಇಷ್ಟು ಕೆಟ್ಟದಾಗಿ ಇರಬೇಕಾದರೆ ಇನ್ನು ಸಿನಿಮಾ ಇನ್ನೆಷ್ಟು ಕೆಟ್ಟದಾಗಿ ಇರಬಹುದು. ಅತ್ಯಾಚಾರಿಯ ಕೈ ಹಿಡಿದು ಅವರಿಗೆ ಮತ ಹಾಕಿ ಅಂತ ಈ ದೇಶದ ಪ್ರಧಾನಿಯವರು ಪ್ರಜ್ವಲ್ ಪರ ಪ್ರಚಾರ ಮಾಡಿದ್ದಾರೆ. ಅಂದರೆ ನಿಮ್ಮ ಸಿನಿಮಾ ಇದೆನಾ? ಆದರೆ ಈ ಸಿನಿಮಾ ಬಿಡುಗಡೆ ಆಗಲು ನಾವು ಬಿಡಲ್ಲ ಎಂದು ಹೇಳಿದರು.
ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ಅವರು ಮಾತನಾಡಿ, ಈ ಹೋರಾಟದ ನಡಿಗೆಯ ಜತೆಗೆ ಸಮಾನತೆಯ ಕಡೆಗೆ ಸಾಗಬೇಕು. ಈ ದೇಶದಲ್ಲಿ ಮೂರು ಐತಿಹಾಸಿಕ ಹೋರಾಟಗಳು ನಡೆದಿವೆ. ಅಂಬೇಡ್ಕರ್ ನೇತೃತ್ವದ ಮಹಾರ್ ಸತ್ಯಾಗ್ರಹ. ಬ್ರಿಟಿಷರ ವಿರುದ್ಧ ಸ್ವಾತಂತ್ರೃಕ್ಕಾಗಿ ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ನಡೆದ ಉಪ್ಪಿನ ಸತ್ಯಾಗ್ರಹ ಹೋರಾಟ ಹಾಗೂ ಸಾಮೂಹಿಕ ನಾಯಕತ್ವದಲ್ಲಿ ದೆಹಲಿ ಗಡಿಗಳಲ್ಲಿ ಪಂಜಾಬ್ ರೈತರು ನಡೆಸಿದ ಹೋರಾಟ ಪ್ರಮುಖವಾಗಿವೆ. ಇಂದು ಹಾಸನದಲ್ಲಿ ಮಹಿಳೆಯರ ಸಮಾನತೆಯ ಕಡೆಗೆ ಕೊಂಡೊಯ್ಯಲು ಹೋರಾಟ ನಡೆಯುತ್ತಿದೆ. ಹಾಸನದಲ್ಲಿ ಸುದೀರ್ಘ ಕಾಲ ನಡೆದು ಬಂದಿರುವ ಪಾಳೇಗಾರಿಕೆ ದರ್ಪದಿಂದ ನಡೆದಿರುವ ದೌರ್ಜನ್ಯಕ್ಕೆ ಕೊನೆ ಹಾಡೋಣ ಎಂದು ಕರೆ ನೀಡಿದರು.
ಸಮಗ್ರ ನ್ಯಾಯ ಪಡೆಯಲು ಅನುಸರಣೆಯಾಗಿ ಐತಿಹಾಸಿಕ ಹೋರಾಟ ನಡೆಸಬೇಕಿದೆ. ನ್ಯಾಯಾಂಗ ಹೋರಾಟ ಮೂಲಕ ಬಳ್ಳಾರಿಯ ಗಣಿ ಧಣಿಗಳ ಪಾಳೆಗಾರಿಕೆಯನ್ನು ಅಂತ್ಯ ಕಾಣಿಸಿದಂತೆ, ಹಾಸನದ ಪಾಳೆಗಾರಿಕೆಯನ್ನು ಅಂತ್ಯ ಮಾಡಲು ನ್ಯಾಯಾಂಗ ಹೋರಾಟವನ್ನು ಯಶಸ್ವಿಯಾಗಿ ನಡೆಸಲು ನನ್ನ ಕೊನೆ ಉಸಿರು ಇರುವವರೆಗೂ ಸಹಕಾರ ನೀಡುತ್ತೇನೆ. ಈ ರಾಜ್ಯದ ಗೃಹಮಂತ್ರಿ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳೇ ಈಗಾಲಾದರೂ ಹಾಸನಕ್ಕೆ ಬನ್ನಿ ನೊಂದ ಮಹಿಳೆಯರ ದನಿ ಕೇಳಿ ನ್ಯಾಯ ನೀಡಿ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರೂಪಾ ಹಾಸನ, ಸಿಐಟಿಯು ರಾಜ್ಯ ಘಟಕದ ಅಧ್ಯಕ್ಷ ಧರ್ಮೇಶ್, ದಸಂಸ ಎನ್.ವೆಂಕಟೇಶ್, ಗುರುಪ್ರಸಾದ್ ಕೆರಗೋಡು, ಕೆ. ಲೀಲಾ, ವರಲಕ್ಷ್ಮೀ, ಪ್ರೊ.ಹಿ.ಶಿ ರಾಮಚಂದ್ರೇಗೌಡ, ಕೆ.ಎಸ್. ವಿಮಲಾ, ಮುನೀರ್ ಕಾಟೀಪಾಳ್ಯ, ಕೆ.ಟಿ. ಶಿವಪ್ರಸಾದ್, ಶೋಭಾ, ಜನ್ನಿ, ಚುಕ್ಕಿ ನಂಜುಂಡಸ್ವಾಮಿ, ಸಿದ್ದನಗೌಡ ಪಾಟೀಲ್, ಸುನಂದಾ ಜಯರಾಂ, ಕೆ.ಎಲ್. ಅಶೋಕ್, ಭಾನು ಮುಷ್ತಾಕ್, ಎಚ್.ಕೆ ಸಂದೇಶ್, ಸುಬ್ಬು ಹೊಲೇಯಾರ್, ಎಚ್.ಎಲ್ ಪುಷ್ಪಾ, ವಸುಂದರಾ ಭೂಪತಿ, ಸಿ. ಬಸವಲಿಂಗಯ್ಯ, ಪ್ರೊ. ಪಂಡಿತಾರಾಧ್ಯ, ಭಾರತಿ ರಾಜಶೇಖರ್, ನಿರ್ಮಲಾ, ಇಂದಿರಾ ಕೃಷ್ಣಪ್ಪ, ಆರ್.ಪಿ ವೆಂಕಟೇಶ ಮೂರ್ತಿ, ಮಾವಳ್ಳಿ ಶಂಕರ್, ದಿನೇಶ್ ಅಮಿನ್ ಮಟ್ಟು, ರಾಜಪ್ಪ ದಳವಾಯಿ, ನಾ ದಿವಾಕರ್ ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು.
ಐತಿಹಾಸಿಕ ಹೋರಾಟಕ್ಕೆ 10 ಸಾವಿರ ಜನ ಸಾಕ್ಷಿ:
ಪ್ರಜ್ವಲ್ ರೇವಣ್ಣನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ನಾನಾ ಭಾಗಗಳಿಂದ ಸುಮಾರು 10 ಸಾವಿರ ಪ್ರತಿಭಟನಾಕಾರರು ಆಗಮಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಮಾಜಿ ಪ್ರಧಾನಿ ಪ್ರಧಾನಿ ಎಚ್.ಡಿ. ದೇವೇಗೌಡ ಕುಟುಂಬದ ವಿರುದ್ಧ ಹಾಸನದಲ್ಲಿ ಇಷ್ಟು ದೊಡ್ಡ ಮಟ್ಟದ ಪ್ರತಿಭಟನೆ ಹಾಸನದಲ್ಲಿ ನಡೆದಿದ್ದು ಇದೇ ಮೊದಲು.
ಬಿಗಿ ಪೊಲೀಸ್ ಬಂದೋಬಸ್ತ್:
ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿರುವ ಪ್ರತಿಭಟನೆಯ ವೇಳೆ ಕಾನೂನು ಸುವ್ಯವಸ್ಥೆ ಹದಗೆಡದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಮೆರವಣಿಗೆಯಿಂದ ಹಿಡಿದು ಸಭಾ ಕಾರ್ಯಕ್ರಮದವರೆಗೂ ಕೂಡ ಪೊಲೀಸರ ಸರ್ಪಗಾವಲನ್ನು ಹಾಕಲಾಗಿತ್ತು. ಯಾವುದೇ ರೀತಿ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.