ಹಾಸನ: ಹಾಸನ ಜಿಲ್ಲೆ ಎಂದರೆ ಕಲೆ, ಸಾಹಿತ್ಯ ಸಂಸ್ಕೃತಿಯಲ್ಲಿ ತನ್ನದೇ ಆದಂತಹ ವಿಶಿಷ್ಟ ಸ್ಥಾನವನ್ನು ಪಡೆದಿದೆ. ಆದರೆ ಈಗ ಲೈಂಗಿಕ ಹಗರಣದಿಂದ ತಲೆ ತಗ್ಗಿಸುವಂತಾಗಿದೆ. ಹೀಗೆ ಮಾಡಿದ ಆರೋಪಿಯನ್ನು ಹಿಡಿಯುವ ನಿಟ್ಟಿನಲ್ಲಿ ಸರ್ಕಾರಗಳು ವಿಫಲವಾಗಿದ್ದು ಆತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗುರುವಾರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಾಹಿತಿ ಭಾನು ಮುಸ್ತಾಕ್ ತಿಳಿಸಿದರು.
ನಮ್ಮ ದೇಶದಲ್ಲಿ ಹಿಂದೆಂದೂ ಕಂಡೇರಿಯದಂತಹ ಲೈಂಗಿಕ ಹಗರಣ ಇದಾಗಿದೆ. ಸಂವಿಧಾನ ಮತ್ತು ಸಂವಿಧಾನದ ಅಧಿಕಾರ ಸ್ವೀಕರಿಸಿದ ಬಹುದೊಡ್ಡ ಕುಟುಂಬದ ಕುಡಿ ಈ ರೀತಿ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿರುವುದು ನಿಜಕ್ಕೂ ಖಂಡನೀಯ. ಸಂಸದ ಪ್ರಜ್ವಲ್ ರೇವಣ್ಣನನ್ನು ಬಂಧಿಸಿ ಆತನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಇಷ್ಟೆಲ್ಲಾ ಪ್ರಕರಣಗಳು ನಡೆದರೂ ಕೂಡ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಆತನನ್ನು ಬಂಧಿಸುವಲ್ಲಿ ವಿಫಲವಾಗಿವೆ. ಪ್ರಕರಣ ಬೆಳಕಿಗೆ ಬಂದ ನಂತರದಲ್ಲಿ ಆತ ಇಲ್ಲಿಂದ ಪರಾರಿಯಾಗಲು ಪರೋಕ್ಷವಾಗಿ ಸರ್ಕಾರಗಳೇ ಕಾರಣವಾಗಿವೆ. ತನ್ನ ಅಧಿಕಾರದ ಮದದಿಂದ ಈ ರೀತಿ ನಡೆದುಕೊಂಡಿರುವುದು ನಿಜಕ್ಕೂ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ದೇವೇಗೌಡರು ಮತ್ತು ಅವರ ಕುಟುಂಬಕ್ಕೆ ಈ ಜಿಲ್ಲೆಯ ಜನರು ಸಾಕಷ್ಟು ಅಧಿಕಾರ ನೀಡಿದ್ದಾರೆ. ಆದರೆ ತಪ್ಪಿತಸ್ಥನನ್ನು ವಿದೇಶದಿಂದ ಕರೆಸುವಲ್ಲಿ ಆ ಕುಟುಂಬ ಸಂಪೂರ್ಣವಾಗಿ ವಿಫಲವಾಗಿದೆ. ಕೇವಲ ಕಣ್ಣೊರೆಸುವ ತಂತ್ರದಿಂದ ದೇವೇಗೌಡರು ಪತ್ರ ಬರೆದಿದ್ದಾರೆ. ನಿಜವಾಗಿಯೂ ಅವರು ಕಾನೂನಿನ ಬಗ್ಗೆ ಗೌರವವಿದ್ದರೆ ಪ್ರಕರಣ ಬೆಳಕಿಗೆ ಬಂದ ಮರುದಿನವೇ ಆತನನ್ನು ಬಂಧಿಸಬೇಕು ಎಂದು ಒತ್ತಾಯಿಸಬೇಕಾಗಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಸದನಿಗೆ ಕಾನೂನಿನ ಬಗ್ಗೆ ಗೌರವ ಇರಬೇಕು. ಸಂವಿಧಾನದ ಅಡಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಆತ ದೇಶ ಬಿಟ್ಟು ಪರಾರಿಯಾಗಿ ನಾನು 31ರಂದು ಬರುತ್ತೇನೆ ಎಂದು ಹೇಳುವ ಮೂಲಕ ಎಲ್ಲರೂ ತನ್ನನ್ನು ರೆಡ್ ಕಾರ್ಪೆಟ್ ಹಾಕಿ ಸ್ವಾಗತ ಕೋರುವಂತೆ ಹೇಳಿರುವುದು ನಿಜಕ್ಕೂ ಅಸಹ್ಯವನ್ನುಂಟು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನವಾದಿ ಮಹಿಳಾ ಸಂಘದ ಅಧ್ಯಕ್ಷರಾದ ಮೀನಾಕ್ಷಿ ಮಾತನಾಡಿ, ಭವಾನಿ ರೇವಣ್ಣ ಅವರು ಕೂಡ ಮಹಿಳೆ. ಆದರೆ ಇದನ್ನು ಖಂಡಿಸಲು ಅವರು ವಿಫಲರಾಗಿದ್ದಾರೆ. ಇದಲ್ಲದೆ ಬಿಜೆಪಿಯ ಘಟಾನುಘಟಿ ನಾಯಕರು ರಾಜಕಾರಣಕ್ಕಾಗಿ ನೇಹಾ ಪ್ರಕರಣವನ್ನು ಬೀದಿಗೆ ತಂದು ಹೋರಾಟ ಮಾಡಿದಂತಹ ಶೋಭಾ ಕರಂದ್ಲಾಜೆ, ಅಮಿತ್ ಶಾ, ಪ್ರಧಾನಿ ಮೋದಿ ಅವರು ಇದರ ಬಗ್ಗೆ ಚಕಾರ ಎತ್ತುತ್ತಿಲ್ಲ. ಅಪಹರಣ ಪ್ರಕರಣ ಸಂಬಂಧ ಭವಾನಿ ಅವರಿಗೂ ಎರಡು ಬಾರಿ ನೋಟಿಸ್ ನೀಡಿದ್ದರೂ ಕೂಡ ಅವರು ವಿಚಾರಣೆಗೆ ಹಾಜರಾಗಿಲ್ಲ. ಬಡವರಿಗೆ ಒಂದು ನ್ಯಾಯ, ದೊಡ್ಡವರಿಗೆ ಒಂದು ನ್ಯಾಯವೇ ಎಂದು ಪ್ರಶ್ನಿಸಿದರು.
ದೇವೇಗೌಡರು ಧ್ರುತರಾಷ್ಟ್ರನ ತರ ಕಣ್ಣು ಮುಚ್ಚು ಕುಳಿತಿದ್ದಾರೆ. ಕುಮಾರಸ್ವಾಮಿ ದಿನಕ್ಕೊಂದು ಸುಳ್ಳು ಹೇಳುತ್ತಿದ್ದಾರೆ. ದಿನಕ್ಕೊಂದು, ಗಂಟೆಗೊಂದು ಹೇಳಿಕೆಗಳನ್ನು ನೀಡುವ ಮೂಲಕ ಈ ಪ್ರಕರಣದ ತನಿಕೆಯ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ. ಕುಮಾರಸ್ವಾಮಿ ಅವರು ಈ ಹೋರಾಟ ರಾಜಕೀಯ ಪ್ರೇರಿತ ಎಂದು ಹೇಳಿಕೆ ನೀಡಿರುವುದು ನಿಜಕ್ಕೂ ಖಂಡನೀಯ. ನಾವು ಯಾರ ಪ್ರೇರಿತಕ್ಕೂ ಒಳಗಾಗಿ ಪ್ರತಿಭಟನೆ ನಡೆಸುತ್ತಿಲ್ಲ. ಬದಲಾಗಿ ಮಹಿಳೆಯರ ರಕ್ಷಣೆಗಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು
ಸುದ್ದಿಗೋಷ್ಠಿಯಲ್ಲಿ ಮಹಿಳಾ ಮುಖಂಡರಾದ ಕೆ.ಎಸ್. ವಿಮಲಾ, ದೇವಿ, ಲೀಲಾ, ಪ್ರಭಾ ಹಾಜರಿದ್ದರು.