ಹಾಸನ: ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಪರ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹಾಸನದಲ್ಲಿ ಗುರುವಾರ ಸಂಜೆ ರೋಡ್ ಶೋ ನಡೆಸುವ ಮೂಲಕ ಪ್ರಚಾರ ಮಾಡಿದರು.
ನಗರದ ಮಹಾವೀರದಿಂದ ಆರಂಭವಾದ ರೋಡ್ ಶೋ ಕಸ್ತೂರಿಬಾ ರಸ್ತೆ, ಪಿಚ್ಚರ್ ಪ್ಯಾಲೇಸ್‌ರಸ್ತೆ ಮೂಲಕ ಆಗಮಿಸಿ ಹೇಮಾವತಿ ಪ್ರತಿಮೆ ಮುಂಭಾಗ ಮೆರವಣಿಗೆ ಅಂತ್ಯಗೊಂಡಿತು.
ಮೆರವಣಿಗೆಯಲ್ಲಿ ಮಾತನಾಡಿದ ಆರ್. ಅಶೋಕ್ ಇಡೀ ದೇಶದಲ್ಲಿ ಒಂದೇ ಹೆಸರು ಓಡುತ್ತಿರುವುದು. ಅದು ಮೋದಿ ಹೆಸರು, ಸ್ವಾತಂತ್ರೃ ಬಂದು 75 ವರ್ಷವಾಗಿದೆ. ಒಬ್ಬ ವ್ಯಕ್ತಿ ಹೆಸರಿನಲ್ಲಿ ಮತ ಕೇಳಿದ ಇತಿಹಾಸ ದೇಶದಲ್ಲಿ ಇಲ್ಲ, ಆದರೆ ಇಂದು ಕಾಂಗ್ರೆಸ್ ದೇಶದಲ್ಲಿ ಧೂಳಿಪಟವಾಗಲಿದೆ ಎಂದು ಹೇಳಿದರು.
ನರೇಂದ್ರ ಮೋದಿ ಅವರು ದೇಶ ಕಾಯುವ ಸೈನಿಕರಾಗಿದ್ದಾರೆ. ಆದರೆ, ಕಾಂಗ್ರೆಸ್ ಲೂಟಿಕೋರರ ಪಕ್ಷ, ಇಡಿ ರಾಜ್ಯವನ್ನು ಸಿದ್ದರಾಮಯ್ಯ ಮತ್ತು ಡಿಕೆ. ಶಿವಕುಮಾರ್ ಅವರು ಲೂಟಿ ಮಾಡುತ್ತಿದ್ದಾರೆ. ಇಂತಹ ಲೂಟಿಕೋರರ ಪಕ್ಷವನ್ನ ಕಿತ್ತೊಗೆಯಬೇಕು ಎಂದು ಜನ ತೀರ್ಮಾನ ಮಾಡಿದ್ದಾರೆ. ಆದ್ದರಿಂದ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನವನ್ನ ಎನ್‌ಡಿಎ ಮೈತ್ರಿ ಪಕ್ಷ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಡಿಕೆ ಸುರೇಶ್ ಅವರು ದೇಶ ವಿಭಾಗವಾಗಬೇಕು ಎಂದು ಹೇಳಿಕೆ ನೀಡುತ್ತಾರೆ. ಆದರೆ ನಮ್ಮಲ್ಲೇ ಇದ್ದ ವ್ಯಕ್ತಿ ಈಗ ಕಾಂಗ್ರಸ್‌ಗೆ ಹೋಗಿರುವ ಲಕ್ಷ್ಮಣ್ ಸವದಿ ಶ್ರೀರಾಮನ ಹೆಸರು ಹೇಳಲು ಹಿಂದೇಟು ಹಾಕುತ್ತಿದ್ದಾರೆ. ಕಾಂಗ್ರೆಸ್‌ನವರಿಗೆ ಮಾನ ಮರ್ಯಾದೆ ಇಲ್ಲ, ರಾಜ್ಯದಲ್ಲಿ ದಿನ ದಿನಕ್ಕೆ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಹಿಂದೂ ಕಾರ್ಯಕರ್ತರ ಕೊಲೆಯಾಗುತ್ತಿದೆ. ಇದಕ್ಕೆ ಈ ಬಾರಿ ರಾಜ್ಯದ ಜನರು ತಕ್ಕ ಉತ್ತರ ನೀಡಬೇಕು ಎಂದು ಹೇಳಿದರು.
ಮೆರವಣಿಗೆಯಲ್ಲಿ ಭಾಗವಹಿಸಿದ್ದ ಕೆಲ ಬಿಜೆಪಿ ಕಾರ್ಯಕರ್ತರು ಪ್ರೀತಮ್ ಗೌಡ ಪರ ಘೋಷಣೆ ಕೂಗುತ್ತಿದ್ದರು. ಇದಕ್ಕೆ ಅಶೋಕ್ ನಾನು 7 ಬಾರಿ ಶಾಸಕನಾಗಿದ್ದೇನೆ, ಎಲ್ಲಾ ರಾಜಕಾರಣವನ್ನ ನೋಡಿದ್ದೇನೆ, ಅರ್ಥಮಾಡಿಕೊಳ್ಳಿ ಪ್ರಜ್ವಲ್ ರೇವಣ್ಣ ಅವರಿಗೆ ಮತ ನೀಡಿ ಎಂದು ಎಚ್ಚರಿಕೆ ನೀಡಿದರು
ಇಡೀ ದೇಶದಲ್ಲಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ 400 ಸೀಟುಗಳನ್ನು ಗೆಲ್ಲಬೇಕು. ಒಂದು ಸೀಟು ಮಿಸ್ ಆಗಬಾರದು ಹಾಸನ, ಮೈಸೂರು, ಮಂಡ್ಯ ಎಲ್ಲಾ ಕಡೆಯೂ ಕೂಡ ಗೆಲುವು ಸಾಧಿಸಬೇಕು. ಅದರಲ್ಲಿಯೂ ಹಾಸನದ ಪಾಲು ಇರಬೇಕು. ಪ್ರೀತಮ್ ಗೌಡ ನೇತೃತ್ವದಲ್ಲಿ ನೀವೆಲ್ಲರೂ ಬಂದಿದ್ದೀರಾ ಮೈತ್ರಿ ಅಭ್ಯರ್ಥಿಯ ಪರವಾಗಿ ಮತ ನೀಡಬೇಕು ಮತ್ತು ಪ್ರಚಾರ ಮಾಡಬೇಕು ಎಂದು ಸಲಹೆ ನೀಡಿದರು.
ವಿಧಾನ ಪರಿಷತ್ ಉಪಸಭಾಪತಿ ಪ್ರಣೇಶ್, ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ, ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಸಿಮೆಂಟ್ ಮಂಜು, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಯೋಗಾರಮೇಶ್ ಇತರರು ಇದ್ದರು.
ಮತಯಾಚಿಸಿದ ಪ್ರೀತಮ್ ಗೌಡ:
ವಿರೋಧ ಪಕ್ಷದ ನಾಯಕ ಅಶೋಕ್ ರೋಡ್ ಶೋ ವೇಳೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಆಗಮಿಸಿ ಮತಯಾಚನೆಯಲ್ಲಿ ಭಾಗವಹಿಸಿದ್ದರು.
ನಂತರ ಮಾತನಾಡಿದ ಅವರು, ಇಲ್ಲಿ ಸೇರಿರುವುದು ಕೇವಲ ಬಿಜೆಪಿ ಕಾರ್ಯಕರ್ತರು, ಬೇರೆ ಯಾರು ಬಂದಿಲ್ಲ, ಅಶೋಕಅಣ್ಣ ಅವರು ಬರುತ್ತಾರೆ ಎಂದು ಜಿಲ್ಲೆಯ ಬೂತ್ ಮಟ್ಟದಿಂದ ಕಾರ್ಯಕರ್ತರು ಆಗಮಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗಬೇಕು.ಅದಕ್ಕೆ ರಾಜ್ಯದಲ್ಲಿ 28 ಸ್ಥಾನಗಳನ್ನ ಗೆಲ್ಲಬೇಕು. ಅದಕ್ಕಾಗಿ ನಾವು ಹೋರಾಟ ಮಾಡಬೇಕು ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಬಿಜೆಪಿಯವರೇ ಮುಖ್ಯಮಂತ್ರಿಯಾಗಲಿ ಎಂದು ಹೇಳಿದರಲ್ಲದೆ, ತಮ್ಮ ಭಾಷಣದಲ್ಲಿ ಅಪ್ಪಿ ತಪ್ಪಿಯು ಕೂಡ ಪ್ರಜ್ವಲ್ ರೇವಣ್ಣ ಜೆಡಿಎಸ್ ಪಕ್ಷದ ಹೆಸರು ಹೇಳದೆ ಮತಯಾಚನೆ ಮಾಡಿದರು