ಜಿಲ್ಲೆ

ಪ್ರಜ್ವಲ್ ಬಂಧನಕ್ಕೆ ಬಿಎಸ್‌ಪಿ ಒತ್ತಾಯ

ಚಿತ್ರದುರ್ಗ: ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿ ಸಂಸದ ಪ್ರಜ್ವಲ್‌ರೇವಣ್ಣನನ್ನು ಕೂಡಲೇ ಬಂಧಿಸುವಂತೆ ಬಹುಜನ ಸಮಾಜ ಪಕ್ಷದ ಜಿಲ್ಲಾ ಸಮಿತಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಜಿಲ್ಲಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಿದ ಪಕ್ಷದ ಪ್ರಮುಖರು, ಪ್ರಕರಣದ ಸಂತ್ರಸ್ತೆಯರಿಗೆ ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.
ಕರ್ನಾಟಕದ ಸಂಸ್ಕೃತಿಗೆ ಮಸಿ ಬಳಿಯುವಂಥ ಘಟನೆಗಳು ಬೆಳಕಿಗೆ ಬಂದಿವೆ. ಪೋಕ್ಸೋ ಪ್ರಕರಣದ ಆರೋಪಿ ಮುರುಘಾ ಸ್ವಾಮೀಜಿ ಯಿಂದಾಗಿ ನಾಡು ತಲೆ ತಗ್ಗಿಸುವಂತಾಗಿತ್ತು. ಪ್ರಜ್ವಲ್ ಹಾಗೂ ಶಾಸಕ ಎಚ್.ಡಿ.ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣ ದಾಖಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಜಾಣ ಮೌನ ವಹಿಸಿದ್ದಾರೆ. ವಿಚಾರ ಗೊತ್ತಿದ್ದರೂ ಕೇಂದ್ರ ಗೃಹಮಂತ್ರಿ ಅಮಿತ್‌ಷಾ ಅವರು ಪ್ರಜ್ವಲ್‌ಗೆ ಟಿಕೆಟ್ ಕೊಟ್ಟಿದ್ದಾರೆ. ಕೇಂದ್ರ ನೆರವಿನೊಂದಿಗೆ ಜೆಡಿಎಸ್ ನಾಯಕರು ಪ್ರಜ್ವಲ್‌ನನ್ನು ವಿದೇಶಕ್ಕೆ ಕಳಿಸಿದ್ದಾರೆ. ಮಾಜಿ ಸಿಎಂ ಎಚ್. ಡಿ.ಕುಮಾರಸ್ವಾಮಿ ಅವರು, ಪೆನ್‌ಡ್ರೈವ್ ಬಹಿರಂಗ ಮಾಡಿದ್ದು, ಹಂಚಿದ್ದು ಯಾರೆಂದು ಕೇಳಿರುವುದು, ಪ್ರಜ್ವಲ್ ಲಂಪಟತನ ನಿಜವೆಂದು ಒಪ್ಪಿಕೊಂಡಂತಾಗಿದೆ. ತನಿಖೆ ದಿಕ್ಕನ್ನು ಕುಮಾರಸ್ವಾಮಿ ಬದಲಾಯಿಸಲು ಪ್ರಯತ್ನಿಸಿದ್ದಾರೆ. ಪ್ರಜ್ವಲ್‌ನನ್ನು ವಿದೇಶದಿಂದ ಕರೆಸಿ ತನಿಖೆಗೆ ಒಪ್ಪಿಸಿದ್ದರೆ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ನ್ಯಾಯ ಪ್ರಜ್ಞೆ ಮೆಚ್ಚಬಹುದಾಗಿತ್ತು.
ಕಾನೂನಿನ ಮುಂದೆ ಎಷ್ಟೇ ದೊಡ್ಡವರಾದರೂ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಬೇಕೆಂಬುದನ್ನು ನಿರೂಪಿಸಬೇಕಾದ ಹೊಣೆಗಾರಿಕೆ ಸಿದ್ದರಾಮಯ್ಯ ಸರ್ಕಾರದ ಮೇಲಿದೆ ಎಂದು ಡಿಸಿ ಟಿ. ವೆಂಕಟೇಶ್ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಎನ್. ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಒ. ಹನುಮಂತರಾಯ, ತಾಲೂಕು ಅಧ್ಯಕ್ಷೆ ಲಕ್ಷ್ಮಮ್ಮ ತಿಳಿಸಿದ್ದಾರೆ.