ಮೈಸೂರು: ದೇಶದ ಪ್ರತಿ ಪ್ರಜೆಯ ಸಬಲೀಕರಣ ಮಾಡುವುದೇ ಸಂವಿಧಾನದ ಗುರಿ ಮತ್ತು ಆಶಯವಾಗಿದೆ ಎಂದು ಚಿಂತಕ, ಲೇಖಕ ಪ್ರೊ.ಮುಜಾಫರ್ ಅಸಾದಿ ಹೇಳಿದರು.
ನಗರದ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ(ಸಿಎಫ್‌ಟಿಆರ್‌ಐ)ನಲ್ಲಿ ಎಸ್‌ಸಿ, ಎಸ್‌ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂವಿಧಾನ ಜಾಗೃತಿ ಗ್ರಂಥ. ಇದು ರಾಷ್ಟ್ರದ ಸ್ಥಿತಿಯನ್ನು ಪರಿವರ್ತನೆ ಮಾಡಿದ ಜ್ಞಾನದ ಹೊತ್ತಿಗೆಯೂ ಹೌದು. ಭಾರತವು ಜಾಗತಿಕ ಆರ್ಥಿಕ ಶಕ್ತಿಯಾಗಿ ರೂಪಗೊಳ್ಳಲು ಇದರಿಂದ ಸಾಧ್ಯವಾಗಿದೆ. ಆದ್ದರಿಂದ ಇದನ್ನು ಪ್ರತಿಯೊಬ್ಬರು ಓದಿ ಅರ್ಥೈಸಿಕೊಳ್ಳಬೇಕು ಎಂದು ಹೇಳಿದರು.
ನಮ್ಮ ಸಂವಿಧಾನ ವೈವಿಧ್ಯಗಳ ಸಂಗಮವಾಗಿದ್ದು, ಅದು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳನ್ನು ಸರ್ಕಾರದ ಮೂರು ಮುಖ್ಯ ಅಂಗಗಳಾಗಿ ಏರ್ಪಡಿಸುತ್ತದೆ. ಸಂವಿಧಾನವು ಪ್ರತಿ ಅಂಗದ ಅಧಿಕಾರದ ವ್ಯಾಖ್ಯೆಯನ್ನು ನೀಡುವುದಲ್ಲದೆ ಅವುಗಳ ಜವಾಬ್ದಾರಿಯನ್ನೂ ಖಚಿತಗೊಳಿಸುತ್ತದೆ ಎಂದರು.
ಜಮೀನುದಾರರು, ವ್ಯಾಪಾರಿಗಳ ವಶದಲ್ಲಿ ಭೂಮಿಯು ಬಡವರು, ರೈತರಿಗೆ ಸಿಗುವಂತಹ ಕಾಯ್ದೆ ಅನುಷ್ಠಾನದಲ್ಲಿ ಸಂವಿಧಾನ ಆಶಯ ಅಡಗಿದೆ. ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಿದೆ. ಮಹಿಳೆಯರು ಸೇರಿದಂತೆ ಸಮಾಜದ ಪ್ರತಿಯೊಬ್ಬರ ಹಕ್ಕುಗಳನ್ನು ರಕ್ಷಿಸಿ, ಸ್ವಾತಂತ್ರೃವನ್ನು ಕಲ್ಪಿಸಿಕೊಟ್ಟಿದೆ. ಹೀಗಾಗಿ, ಸಂವಿಧಾನವೇ ಭಾರತೀಯ ಜೀವಾಳವಾಗಿದೆ ಎಂದರು.
ಪೂನಾ ಒಪ್ಪಂದ, ಗಾಂಧಿ-ನೆಹರೂ ಅವರೊಂದಿಗೆ ಸಂವಾದ, ಚರ್ಚೆಗಳು ಸೇರಿದಂತೆ ಅಂಬೇಡ್ಕರ್ ಅವರ ಎಲ್ಲ ಭಾಷಣಗಳು, ಬರಹಗಳು, ಚಿಂತನೆಗಳು ಜ್ಞಾನದ ಜ್ಯೋತಿಯಾಗಿದೆ. ಅವುಗಳನ್ನು ಓದಿದರೆ ಪ್ರತಿಯೊಬ್ಬರು ಪ್ರಬುದ್ಧ ಭಾರತೀಯರಾಗುತ್ತಾರೆ ಎಂದರು.
ಸಂಸ್ಥೆ ನಿರ್ದೇಶಕಿ ಪ್ರೊ.ಶ್ರೀದೇವಿ ಅನ್ನಪೂರ್ಣ ಸಿಂಗ್, ಆಡಳಿತ ನಿರ್ವಹಣಾಧಿಕಾರಿ ಕೆ.ರವಿಕುಮಾರ್, ಎಸ್‌ಸಿಎಸ್‌ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಸ್ವಾಮಿ ಹಾಜರಿದ್ದರು.