ಅರಕಲಗೂಡು: ಸಂವಿಧಾನದಲ್ಲಿ ಅಂಬೇಡ್ಕರ್ ರಚಿಸಿದ ಕಾನೂನುಗಳ ಪಾಲನೆ ಮೂಲಕ ಪ್ರಜಾಪ್ರಭುತ್ವದ ಗೌರವ ಕಾಪಾಡಲು ನಾಗರಿಕರು ಸಹಕರಿಸಬೇಕು ಎಂದು ಮಲ್ಲಿಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಆರ್.ರಂಗಸ್ವಾಮಿ ಸಲಹೆ ನೀಡಿದರು.
ತಾಲೂಕಿನ ಮಲ್ಲಿಪಟ್ಟಣದಲ್ಲಿ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಗ್ರಾಮ ಪಂಚಾಯಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸೋಮವಾರ ಕಾನೂನು ಅರಿವು ಮೂಲಕ ನಾಗರಿಕ ಸಬಲೀಕರಣ ಆಂದೋಲನ ಕಾರ್ಯಕ್ರಮ ಅಂಗವಾಗಿ ಆಯೋಜಿಸಲಾಗಿದ್ದ ಅಪರಿಮಿತ ಕಾನೂನು ಅರಿವು-ನೆರವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಜನರು ಹೆಚ್ಚಾಗಿ ಕಾನೂನು ಜ್ಞಾನ ಬೆಳೆಸಿಕೊಳ್ಳಬೇಕು. ಮುಖ್ಯವಾಗಿ ನಾಗರಿಕ ಸಮಾಜದಲ್ಲಿ ಕಾನೂನುಗಳನ್ನು ಪಾಲನೆ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಸಿವಿಲ್ ನ್ಯಾಯಾಧೀಶೆ ಚೇತನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜನಸಾಮಾನ್ಯರು ಸರ್ಕಾರದ ಸವಲತ್ತುಗಳನ್ನು ಸುಲಭವಾಗಿ ದಕ್ಕಿಸಿಕೊಳ್ಳಲು ಕಾನೂನು ಜ್ಞಾನ ಅತ್ಯವಶ್ಯಕ ಎಂದರು.
ಕಾನೂನು ಅರಿವಿನ ಕೊರತೆ ಇದ್ದರೆ ಸಮಾಜದಲ್ಲಿ ನೆಮ್ಮದಿ ಜೀವನ ಕಂಡುಕೊಳ್ಳಲು ಕಷ್ಟಕರವಾಗಲಿದೆ. ನಾನಾ ಸಮಸ್ಯೆಗಳಿಗೆ ಸಿಲುಕಿ ತೊಂದರೆ ಅನುಭವಿಸಬೇಕಾಗುತ್ತದೆ. ವಾಹನ ಚಾಲಕರು ವಿಮೆ, ಚಾಲನಾ ಪರವಾನಿಗೆ ಪಡೆದು ಸಂಚಾರ ನಿಯಮಗಳನ್ನು ಪಾಲಿಸಬೇಕು. ವೃದ್ಧರನ್ನು ನೋಡಿಕೊಳ್ಳದಿದ್ದರೆ ಕಾನೂನಿನ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ತಿಳಿಸಿದರು.
ದುರ್ಬಲ ವರ್ಗದ ಜನರಿಗೆ ಸೂಕ್ತ ನ್ಯಾಯ ಸಿಗಬೇಕಿದೆ. ನ್ಯಾಯಾಲಯದ ಆವರಣದಲ್ಲಿ ಕಾನೂನು ಸಲಹಾ ಕೇಂದ್ರವನ್ನು ತೆರೆದಿದ್ದು ಕಾನೂನು ಸಮಸ್ಯೆಗಳಿದ್ದವರಿಗೆ ಉಚಿತ ಸಲಹೆ ನೀಡಲಾಗುವುದು. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ನ್ಯಾಯಾಧೀಶ ಎಂ.ರಘು, ವಕೀಲರ ಸಂಘದ ಅಧ್ಯಕ್ಷ ಅರುಣ್‌ಕುಮಾರ್, ಕಾರ್ಯದರ್ಶಿ ದೇವರಾಜು, ವಕೀಲರಾದ ವೇದಮೂರ್ತಿ, ಶಂಕರಯ್ಯ, ಮಹೇಶ್, ಆನಂದ, ವಿಶ್ವನಾಥ್, ಪಶುವೈದ್ಯ ಡಾ.ಚೇತನ್, ಗ್ರಾ.ಪಂ. ಉಪಾಧ್ಯಕ್ಷ ನಾಗರಾಜು ಮತ್ತಿತರರಿದ್ದರು.