ಜಿಲ್ಲೆ

ಪ್ರಜಾಪ್ರಭುತ್ವಕ್ಕೆ ಮೂಲ ಆಧಾರವೇ ಸಂವಿಧಾನ: ಪ್ರೊ.ಎಚ್.ರಾಜಶೇಖರ್ ಅಭಿಮತ

ಮೈಸೂರು: ದೇಶದ ವ್ಯವಸ್ಥೆಗೆ ಸಂವಿಧಾನ ಭದ್ರ ಅಡಿಪಾಯವಾಗಿದ್ದು, ಭಗವದ್ಗೀತೆಯಂತೆ ಸಂವಿಧಾನವನ್ನು ಶ್ರದ್ಧೆ, ಭಕ್ತಿಯಿಂದ ನಾವೆಲ್ಲರೂ ಓದಿ ಅದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿ ಪ್ರೊ.ಎಚ್.ರಾಜಶೇಖರ್ ತಿಳಿಸಿದರು.
ಮಾನಸಗಂಗೋತ್ರಿಯ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದಿಂದ ಶುಕ್ರವಾರ ಆಯೋಜಿಸಿದ್ದ 73ನೇ ವರ್ಷದ ಸಂವಿಧಾನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವಕ್ಕೆ ಮೂಲ ಆಧಾರವೇ ಸಂವಿಧಾನ. ಸಂವಿಧಾನ ಇರದ ದೇಶದಲ್ಲಿ ಅರಾಜಕತೆ ಸೃಷ್ಟಿ ಆಗುತ್ತದೆ. ದೇಶದ ವ್ಯವಸ್ಥೆಗೆ ಸಂವಿಧಾನವೇ ಭದ್ರ ಅಡಿಪಾಯವಾಗಿದ್ದು, ಅದನ್ನು ಕಾಟಾಚಾರಕ್ಕೆ ತಿಳಿದುಕೊಳ್ಳಬಾರದು. ಅರ್ಥಗರ್ಭಿತವಾಗಿ ಭಗವದ್ಗೀತೆಯಂತೆ ಭಕ್ತಿಯಿಂದ ಎಲ್ಲರೂ ಅಭ್ಯಾಸ ಮಾಡಿ ಸಂವಿಧಾನದ ಆಶಯವನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಸವಿಸ್ತಾರವಾದ ಸಂವಿಧಾನವನ್ನು ಭಾರತಕ್ಕೆ ಕೊಟ್ಟಿದ್ದಾರೆ. ಅದರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಸಂವಿಧಾನ ಓದು ಎಂಬುದು ಚಳವಳಿ ರೂಪ ಪಡೆದುಕೊಳ್ಳಬೇಕು. ಸಾಮಾಜಿಕ ನ್ಯಾಯ ಸಂವಿಧಾನದಿಂದ ಸಾಧ್ಯ. ಈಗ ಶಿಕ್ಷಣದಲ್ಲಿ ಎನ್‌ಇಪಿ ಬಂದಿದ್ದು, ಇಂಟರ್ ಕೋರ್ಸ್ ಆಗಿ ಇದೀಗ ಯಾವುದೇ ವಿಷಯವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಇದೆ. ಈ ನಿಟ್ಟಿನಲ್ಲಿ ಅಂಬೇಡ್ಕರ್ ಅಧ್ಯಯನ ಕೇಂದ್ರ ಬೆಳೆಯಲಿ. ಹೆಚ್ಚು ಸಂಶೋದನೆ ನಡೆಯಲಿ ಎಂದು ಆಶಿಸಿದರು.
ಕಾರ್ಮಿಕ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಬಾಬು ಮ್ಯಾಥ್ಯೂ ಮಾತನಾಡಿ, ನಮ್ಮ ದೇಶದ ಸಂವಿಧಾನಕ್ಕೆ ಜಗತ್ತಿನಲ್ಲಿ ಶ್ರೇಷ್ಠ ಸ್ಥಾನವಿದೆ. ಸಂವಿಧಾನಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ. ನಾವಿಂದು ಸಂವಿಧಾನವನ್ನು ಕೊಡುಗೆಯಾಗಿ ಪಡೆದುಕೊಂಡಿದ್ದೇವೆ ಎಂದು ಹೇಳಿದರು.
ಸಮಾಜ ಕಾರ್ಯ ವಿಭಾಗದ ಪ್ರೊ.ಆರ್.ಶಿವಪ್ಪ, ಕೇಂದ್ರದ ನಿರ್ದೇಶಕ ಡಾ.ಎಸ್.ನರೇಂದ್ರ ಕುಮಾರ್, ನಿವೃತ್ತ ಮೇಜರ್ ಒಂಬತ್ಕೆರೆ ಇತರರು ಇದ್ದರು.