ಬಾಗಲಕೋಟೆ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪವಿತ್ರವಾಗಿದ್ದು, ತಪ್ಪದೇ ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕೆಂದು ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಹಾಗೂ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಹೇಳಿದರು.
ಇಳಕಲ್ಲ ತಾಲೂಕಿನ ಕರಡಿ ಗ್ರಾಮದಲ್ಲಿ ಗುರುವಾರ ನಡೆದ ಬಸವೇಶ್ವರ ಜಾತ್ರೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಪ್ರಜಾಪ್ರಭುತ್ವದ ಸುಭದ್ರತೆಗೆ ಪ್ರತಿಯೊಬ್ಬ ನಾಗರಿಕರು ಮೇ ೭ ರಂದು ಜರಗುವ ಮತದಾನ ಕೇಂದ್ರಕ್ಕೆ ಬಂದು ಮತ ಚಲಾಯಿಸುವದರ ಜೊತೆಗೆ ಇತರರು ತಪ್ಪದೇ ಮತ ಚಲಾಯಿಸುವಂತೆ ಮಾಡಬೇಕು ಎಂದರು.
ನಮ್ಮದು ಪ್ರಜಾಪ್ರಭುತ್ವ ದೇಶವಿರುವದರಿಂದ ಪ್ರಜಾ ಪ್ರತಿನಿಧಿಗಳನ್ನು ಆಯ್ಕೆಮಾಡಿ ಕಳುಹಿಸಬೇಕಾಗಿದೆ. ಪ್ರತಿ ೫ ವರ್ಷಗಳಿಗೊಮ್ಮೆ ಬರುವ ಈ ಪ್ರಜಾಪ್ರಭುತ್ವದ ಚುನಾವಣಾ ಹಬ್ಬದಲ್ಲಿ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಿಕೊಂಡು ಯಾವುದೇ ಆಶೆ ಆಮಿಷಕ್ಕೆ ಒಳಗಾಗದೇ ನಿರ್ಭಯದಿಂದ ಮತ ಚಲಾಯಿಸುವಂತಾಗಬೇಕು. ನಿಮ್ಮ ಅಮೂಲ್ಯವಾದ ಮತದಾನದಲ್ಲಿ ದೇಶದ ಭವಿಷ್ಯ ಅಡಗಿದೆ. ಈ ಕಾರಣದಿಂದ ಮತದಾನ ಪ್ರಮಾಣ ಹೆಚ್ಚಳಕ್ಕೆ ಸ್ವೀಪ್ ಸಮಿತಿ ಮೂಲಕ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜಾಗೃತಿ ಕಾರ್ಯಕ್ರಮದಲ್ಲಿ ಇಳಕಲ್ಲ ತಾಲೂಕಾ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಮುರಳಿಧರ ದೇಶಪಾಂಡೆ, ನರೇಗಾ ಯೋಜನೆಯ ತಾ.ಪಂ ಸಹಾಯಕ ನಿರ್ದೇಶಕ ಶಿರಗುಪ್ಪಿ ಸೇರಿದಂತೆ ಇತರರು ಉಪಸ್ಥಿತರಿದ್ದರು.