ನಾಗಮಂಗಲ ತಾಲೂಕಿನ ಪಿ.ನೇರಲಕೆರೆ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎನ್.ಚಲುವರಾಯಸ್ವಾಮಿ ಚುನಾವಣಾ ಪ್ರಚಾರ ನಡೆಸಿದರು. ಧನಲಕ್ಷ್ಮೀ ಚಲುವರಾಯಸ್ವಾಮಿ ಇದ್ದರು. 
ಜಿಲ್ಲೆ

ಪ್ರಜಾಪ್ರಭುತ್ವ ಉಳಿವಿಗಾಗಿ ಕಾಂಗ್ರೆಸ್ ಬೆಂಬಲಿಸಿ

ನಾಗಮಂಗಲ: ಕಳೆದ 9 ವರ್ಷಗಳಿಂದ ದೇಶವನ್ನಾಳುತ್ತಿರುವ ಬಿಜೆಪಿ ಸರ್ಕಾರ ಸಂವಿಧಾನವನ್ನೇ ಬದಲಿಸುವ ಹುನ್ನಾರ ನಡೆಸುತ್ತಿದೆ. ದಲಿತರು ಮತ್ತು ಹಿಂದುಳಿದ ವರ್ಗದ ಜನರು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಬಹಳ ಕಷ್ಟ ಅನುಭವಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಎನ್.ಚಲುವರಾಯಸ್ವಾಮಿ ಎಚ್ಚರಿಸಿದರು.

ತಾಲೂಕಿನ ಕಸಬಾ ಹೋಬಳಿಯ ಪಿ.ನೇರಳಕೆರೆ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಇತಿಹಾಸವನ್ನು ಪ್ರತಿಯೊಬ್ಬರೂ ತಿಳಿದುಕೊಂಡರೆ ಅದಕ್ಕಿಂತ ಅತ್ಯುತ್ತಮವಾದ ಪಕ್ಷ ಮತ್ತೊಂದಿಲ್ಲ ಎಂಬುದು ಗೊತ್ತಾಗುತ್ತದೆ. ದೇಶಕ್ಕಾಗಿ ಕಾಂಗ್ರೆಸ್ ಪಕ್ಷ ಅಪಾರ ಕೊಡುಗೆ ನೀಡಿದೆ. ಪ್ರಜಾಪ್ರಭುತ್ವದ ಉಳಿವಿಗಾಗಿ ಮತ್ತು ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷವನ್ನು ಪ್ರತಿಯೊಬ್ಬರೂ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಅಡುಗೆ ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಡೀಸೆಲ್ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಗ್ರಾಮೀಣ ಪ್ರದೇಶದ ಎಲ್ಲ ವರ್ಗದ ಬಡ ಜನರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಮಹಿಳೆಯರು ಕುಟುಂಬ ನಿರ್ವಹಣೆ ಮಾಡಲಾಗದಂತಹ ಪರಿಸ್ಥಿತಿ ಉದ್ಭವಿಸಿದೆ. ಮಹಿಳೆಯರಿಗೆ ವಿಶೇಷ ಆದ್ಯತೆ ಕೊಟ್ಟು ಜನಸಾಮಾನ್ಯರ ಕಷ್ಟಗಳನ್ನು ಹೋಗಲಾಡಿಸುವ ಸಲುವಾಗಿಯೇ ಕಾಂಗ್ರೆಸ್ ಪಕ್ಷ ಪ್ರಮುಖವಾದ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆ. ಇದರಿಂದ ಎಲ್ಲ ವರ್ಗದ ಜನರ ಬದುಕು ಹಸನಾಗಲಿದೆ. ಆದ್ದರಿಂದ ಈ ಚುನಾವಣೆಯಲ್ಲಿ ನನಗೆ ಹೆಚ್ಚಿನ ಮತಕೊಟ್ಟು ಆಶೀರ್ವದಿಸಬೇಕು ಎಂದು ಕೋರಿದರು.
ಪ್ರಚಾರದ ವೇಳೆ ಗ್ರಾಮದ ಹಲವರು ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಪಕ್ಷಕ್ಕೆ ಸೇರ್ಪಡೆಯಾದರು.