ಜಿಲ್ಲೆ

ಪ್ರಜಾಪ್ರಭುತ್ವ ಉಳಿವಿಗಾಗಿ ಶ್ರಮಿಸಿ


ಚಿತ್ರದುರ್ಗ: ಪ್ರಜಾಪ್ರಭುತ್ವ ಉಳಿವು, ನಾಡಿನ ಜನರ ಹಿತ ಕಾಯುವ ನಿಟ್ಟಿನಲ್ಲಿ ಸಂಘಟನೆಗಳ, ವೇದಿಕೆಗಳ ಕಾರ್ಯಕರ್ತರು ಹೆಚ್ಚು ಗಮನಹರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸಲಹೆ ನೀಡಿದರು.

ತರಾಸು ರಂಗಮಂದಿರದಲ್ಲಿ ಶನಿವಾರ ನವ ಪ್ರಜಾರಕ್ಷಣಾ ವೇದಿಕೆ ರಾಜ್ಯ ಸಮಿತಿ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮದಕರಿನಾಯಕ ಆಳಿದ ಕೋಟೆನಾಡು ಶ್ರೀಮಂತಿಕೆಯ ಬೀಡು. ಇಲ್ಲಿನ ಕಲೆ, ಸಂಸ್ಕೃತಿ ಬಹು ವೈಶಿಷ್ಟೃದಿಂದ ಕೂಡಿದ್ದು, ನಾಡಿನ ಎಲ್ಲ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ. ಅದಕ್ಕೆ ಜನರ ಪ್ರೋತ್ಸಾಹ ಕೂಡ ಅಗತ್ಯ. ನೂತನ ವೇದಿಕೆಯ ಸಾಮಾಜಿಕ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡಲು ಸಿದ್ಧನಿದ್ದೇನೆ ಎಂದು ಹೇಳಿದರು.

ಕಾಂಗ್ರೆಸ್ ನುಡಿದಂತೆ ನಡೆಯುವ ಪಕ್ಷ. 5 ಗ್ಯಾರಂಟಿ ಜನರಿಗೆ ತಲುಪಿಸುವ ಕಾರ್ಯ ಹಂತ-ಹಂತವಾಗಿ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹಕಾರ ಪಡೆದು ಬಯಲುಸೀಮೆ ಚಿತ್ರದುರ್ಗವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲಾಗುವುದು. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಶಾಸಕರು ಪ್ರಾಮಾಣಿಕವಾಗಿ ಶ್ರಮಿಸಲಿದ್ದಾರೆ ಎಂದು ಭರವಸೆ ನೀಡಿದರು.

ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಪ್ರಜಾರಕ್ಷಣಾ ವೇದಿಕೆಯಿಂದ ಹೆಸರಿಗೆ ತಕ್ಕಂತೆ ಉತ್ತಮ ಕೆಲಸ ಆಗಬೇಕು.ಡಾ.ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ ಸಮಾಜಮುಖಿಯಾಗಿ ಪದಾಧಿಕಾರಿಗಳು, ಕಾರ್ಯಕರ್ತರು ಕಾರ್ಯನಿರ್ವಹಿಸಬೇಕು. ಸಂವಿಧಾನಕ್ಕೆ ಧಕ್ಕೆ ಉಂಟು ಮಾಡುವವರ ವಿರುದ್ಧ ಹೋರಾಡಿ ರಕ್ಷಣೆಗೆ ನಿಲ್ಲಬೇಕು ಎಂದು ಕಿವಿಮಾತು ಹೇಳಿದರು.

ಕಲೆ ಸೇರಿ ವಿವಿಧ ಕ್ಷೇತ್ರದ ಜಿಲ್ಲೆಯ ಸಾಧಕರನ್ನು ಗುರುತಿಸಿ ವೇದಿಕೆ ಸನ್ಮಾನಿಸುತ್ತಿರುವುದು ಅತ್ಯಂತ ಸಂತಸದ ಸಂಗತಿ. ಸದಾ ಜನಪರ ಕಾರ್ಯಗಳಿಗೆ ಒತ್ತು ನೀಡುವ ಮೂಲಕ ಮಾದರಿಯಾಗಬೇಕು ಎಂದರು.

ಭದ್ರಾ ಮೇಲ್ದಂಡೆ, ವೈದ್ಯಕೀಯ ಕಾಲೇಜು ಸೇರಿ ಅನೇಕ ಅಭಿವೃದ್ಧಿ ಕೆಲಸಗಳು ಪೂರ್ಣಗೊಳ್ಳಬೇಕಿದೆ. ಜಿಲ್ಲೆಯ ಜನ ನಿರೀಕ್ಷೆ ಇಟ್ಟು ಕಾಂಗ್ರೆಸ್‌ಗೆ ಬೆಂಬಲಿಸಿದ್ದಾರೆ. ಅದನ್ನು ಉಳಿಸಿಕೊಳ್ಳುವ ಹೊಣೆಗಾರಿಕೆ ಶಾಸಕರ ಮೇಲಿದ್ದು, ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ ಎಂದು ಭರವಸೆ ನೀಡಿದರು.

ಕಲಬುರ್ಗಿ ಶಿವದಾಸಪುರದ ಶ್ರೀ ಸುಭಾಷ್ ಮಹಾರಾಜ್ ಸ್ವಾಮೀಜಿ ನೇತೃತ್ವ ವಹಿಸಿದ್ದರು. ವೇದಿಕೆ ಅಧ್ಯಕ್ಷ ಎಚ್.ಏಕಾಂತಪ್ಪ, ಮಹಿಳಾ ಘಟಕ ದ ಅಧ್ಯಕ್ಷೆ ಮಂಜುಳಾ ಗೌಡ, ಉಸ್ತುವಾರಿ ಸಂಚಾಲಕ ಎ.ಮಂಜುನಾಥ್, ಕಾರ್ಯಾಧ್ಯಕ್ಷ ಎಚ್.ಆನಂದ್ ಚದುರಗೊಳ್ಳ, ಜಿಲ್ಲಾಧ್ಯಕ್ಷ ಪಿ. ಕೋದಂಡಸ್ವಾಮಿ,ರೈತ ಮುಖಂಡ ಕೆ.ಪಿ.ಭೂತಯ್ಯ,ಕಾಂಗ್ರೆಸ್ ಮುಖಂಡರಾದ ಕೆ.ಪಿ.ಸಂಪತ್‌ಕುಮಾರ್, ಡಿ.ಎನ್.ಮೈಲಾರಪ್ಪ, ಎಚ್.ಶಿವಮೂರ್ತಿ, ಫಾದರ್ ಪಾಲ್ ಪ್ರವೀಣ್,

ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯ ಅಧ್ಯಕ್ಷ ಟಿಪ್ಪುಖಾಸಿಂ ಆಲಿ, ದಸಂಸ ಮುಖಂಡರಾದ ಮಹಲಿಂಗಪ್ಪ, ರಾಜಣ್ಣ, ಶಿವ ಮೂರ್ತಪ್ಪ, ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ರಾಜ್ಯ ಅಧ್ಯಕ್ಷ ಹನುಮಂತಪ್ಪ ದುರ್ಗಾ, ರಂಗಭೂಮಿ ಕಲಾವಿದೆ ಸಿದ್ದೇಶ್ವರಿ ಇತರರಿದ್ದರು.

*ಕೋಟ್
ಸರ್ಕಾರದಿಂದ ಸಿಗುವ ಸೌಲಭ್ಯ ಕಲಾವಿದರಿಗೆ ತಲುಪಿಸುವ ನಿಟ್ಟಿನಲ್ಲಿ ವೇದಿಕೆ ಕೆಲಸ ಮಾಡಬೇಕು. ಕಲಾವಿದರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು.
ಎಂ.ಕೆ.ತಾಜ್‌ಪೀರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ

ವೀರೇಂದ್ರ ಪಪ್ಪಿ ಅಭಿವೃದ್ಧಿ ಮಾಡುವರೇ?
ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಗೆದ್ದು 2 ತಿಂಗಳಾಯಿತು. ಇನ್ನೂ ಕ್ಷೇತ್ರದ ಜನರ ಕೈಗೆ ಸಿಗುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಚಿತ್ರದುರ್ಗ ಅಭಿವೃದ್ಧಿ ಆಗುವುದಾದರೂ ಹೇಗೆ. ಚಿತ್ರದುರ್ಗಕ್ಕೆ ಸಿಗುವ ಶಾಸಕರೆಲ್ಲ ಇಂತವರೆ. ಬದಲಾವಣೆ ಯಾವಾಗ ಎಂದು ವೇದಿಕೆ ಅಧ್ಯಕ್ಷ ಎಚ್.ಏಕಾಂತಪ್ಪ ಪ್ರಶ್ನಿಸಿದರು. ಒಂದು ತಿಂಗಳ ಮುಂಚೆಯೇ ಶಾಸಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ, ಅಧ್ಯಕ್ಷತೆ ವಹಿಸಿಕೊಳ್ಳಲು ಮನವಿ ಮಾಡಲಾಗಿತ್ತು. ಆದರೂ ಬರಲಿಲ್ಲ. ಮದುವೆ ಕಾರ್ಯಕ್ಕೆ ಹೋಗಲು ಸಮಯವಿದೆ. ಆದರೆ, ಕನ್ನಡನಾಡು ಮತ್ತು ಕನ್ನಡಿಗರ ಪರ ಅವರಿಗೆ ಇಷ್ಟು ತಾತ್ಸಾರವಿದೆ ಎಂದು ಗೊತ್ತಿರಲಿಲ್ಲ ಎಂದು ಬೇಸರಿಸಿದರು.