ಹನೂರಿನಲ್ಲಿ ಪ್ರಜಾದ್ವನಿ ರಥಯಾತ್ರೆ ಕಾರ್ಯಕ್ರಮ ಸಂಬಂಧ ಶಾಸಕ ಆರ್. ನರೇಂದ್ರ ಅಧ್ಯಕ್ಷೆಯಲ್ಲಿ ಕಾರ್ಯಕರ್ತರು ಹಾಗೂ ಮುಖಂಡರ ಪೂರ್ವಭಾವಿ ಸಭೆ ನಡೆಯಿತು. ಗಿರೀಶ್, ಚಿಕ್ಕತಮ್ಮಯ್ಯ, ವೆಂಕಟರಮಣನಾಯ್ಡು, ಸಿದ್ದರಾಜು ಇತರರು ಇದ್ದರು. 
ಜಿಲ್ಲೆ

ಪ್ರಜಾಧ್ವನಿ ರಥಯಾತ್ರೆ ಯಶಸ್ವಿಗೊಳಿಸಿ

ಹನೂರು: ಆರ್.ಎಸ್.ದೊಡ್ಡಿ ಬಳಿ ಫೆ.21ರಂದು ನಡೆಯುವ ಪ್ರಜಾಧ್ವನಿ ರಥಯಾತ್ರೆ ಕಾರ್ಯಕ್ರಮಕ್ಕೆ ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವುದರ ಮೂಲಕ ಯಶಸ್ವಿಗೊಳಿಸುವಂತೆ ಶಾಸಕ ಆರ್.ನರೇಂದ್ರ ಮನವಿ ಮಾಡಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಪ್ರಜಾಧ್ವನಿ ರಥಯಾತ್ರೆ ಕಾರ್ಯಕ್ರಮ ಸಂಬಂಧ ಆಯೋಜಿಸಿದ್ದ ಕಾರ್ಯಕರ್ತರು ಹಾಗೂ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಕಾಂಗ್ರೆಸ್ ಉತ್ತಮ ಆಡಳಿತವನ್ನು ನೀಡುವುದರ ಜತೆಗೆ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದು, ಜನಮನ್ನಣೆ ಪಡೆದಿವೆ. ಇತ್ತ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಹನೂರು ಕ್ಷೇತ್ರಕ್ಕೆ 3.5 ಸಾವಿರ ಕೋಟಿ ರೂ. ಅನುದಾನ ದೊರಕಿದ್ದು, ಇದರಲ್ಲಿ ಕೆ-ಶಿಪ್ ರಸ್ತೆ ಅಭಿವೃದ್ಧಿ, ಏಕಲವ್ಯ, ಮುರಾರ್ಜಿ ದೇಸಾಯಿ, ಇಂದಿರಾಗಾಂಧಿ ಮಾದರಿ ವಸತಿ ಶಾಲೆಗಳ ಸ್ಥಾಪನೆ, ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನ, ಸೇತುವೆಗಳ ಅಭಿವೃದ್ಧಿ ಸೇರಿದಂತೆ ಇನ್ನು ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದೆ. ಈ ದಿಸೆಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಹೆಚ್ಚಿನ ಒತ್ತನ್ನು ನೀಡಿದೆ. ಆದ್ದರಿಂದ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವುದರ ಮೂಲಕ ಬೂತ್ ಮಟ್ಟದಲ್ಲಿಯೇ ಪಕ್ಷವನ್ನು ಸಂಘಟಿಸಬೇಕು. ಈ ಬಾರಿಯ ಚುನಾವಣೆಯಲ್ಲೂ ಹನೂರು ಕಾಂಗ್ರೆಸ್‌ನ ಭದ್ರಕೋಟೆ ಎಂಬುದನ್ನು ಸಾಬೀತು ಪಡಿಸಬೇಕು ಎಂದು ತಿಳಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ: ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಜನರಿಗೆ ಮನದಟ್ಟು ಮಾಡುವ ಸಲುವಾಗಿ ಹಾಗೂ ಬಿಜೆಪಿ ಸರ್ಕಾರದ ವೈಫಲ್ಯವನ್ನು ತಿಳಿಸಲು ಫೆ.21ರಂದು ಪಟ್ಟಣದ ಆರ್.ಎಸ್.ದೊಡ್ಡಿ ಬಳಿ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಡಾ.ಪರಮೇಶ್ವರ್, ಕೆ.ಎಚ್.ಮುನಿಯಪ್ಪ, ಆರ್.ಧ್ರುವನಾರಾಯಣ ಸೇರಿದಂತೆ ಪಕ್ಷದ ಇನ್ನಿತರ ನಾಯಕರು ಆಗಮಿಸಲಿದ್ದಾರೆ.

ಆದ್ದರಿಂದ ಕ್ಷೇತ್ರದ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು, ವಿವಿಧ ಘಟಕದ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಇದಕ್ಕೂ ಮುನ್ನ ಮಧುವನಹಳ್ಳಿಯಿಂದ ಹನೂರಿನವರೆಗೆ ಹಮ್ಮಿಕೊಂಡಿರುವ ಬೈಕ್ ರ‌್ಯಾಲಿಯಲ್ಲಿ ಕಾರ್ಯಕರ್ತರು ಹಾಗೂ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

ಪಪಂ ಉಪಾಧ್ಯಕ್ಷ ಗಿರೀಶ್, ಸದಸ್ಯರಾದ ಸಂಪತ್‌ಕುಮಾರ್, ಸೋಮಶೇಖರ್, ಮಾಜಿ ಸದಸ್ಯರಾದ ಮಾದೇಶ್, ಬಾಲರಾಜನಾಯ್ಡು, ಟೌನ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜೇಶ್, ಮುಖಂಡರಾದ ಚಿಕ್ಕತಮ್ಮಯ್ಯ, ವೆಂಕಟರಮಣನಾಯ್ಡು, ಉದ್ದನೂರು ಸಿದ್ದರಾಜು, ವೆಂಕಟೇಶ್, ರಮೇಶ್‌ನಾಯ್ಡು, ಹರೀಶ್, ಚಿಕ್ಕಮರಿ ಇದ್ದರು.