ಜಿಲ್ಲೆ

ಪ್ರಚಾರ ಶುರು ಮಾಡಿದ ಖೂಬಾ

ಬಸವಕಲ್ಯಾಣ: ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ಭರ್ಜರಿ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ನಗರದ ವಿವಿಧೆಡೆ ಸುತ್ತಾಡಿ ಮತಯಾಚನೆಗೆ ಸೈ ಎನ್ನುವ ಮೂಲಕ ಬಿಜೆಪಿಯವರು ನಿದ್ರೆಗೆಡುವಂತೆ ಮಾಡಿದ್ದಾರೆ.

ಅಡತ್ ಬಜಾರ್ ನ ಬಹುತೇಕ ಅಂಗಡಿಗಳಿಗೆ ಭೇಟಿ ನೀಡಿ, ಕ್ಷೇತ್ರದ ಸ್ವಾಭಿಮಾನಿ ಬಳಗ ಸೇರಿದಂತೆ ಸ್ಥಳೀಯರ ಒತ್ತಾಯದ ಮೇಲೆ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಪ್ರಜಾಪ್ರಭುತ್ವದಲ್ಲಿ ಚುನಾವಣೆಗೆ ಸ್ಪರ್ಧಿಸಲು ಮುಕ್ತ ಅವಕಾಶಗಳಿವೆ. ಸ್ಥಳೀಯರಿಗೆ ಅನ್ಯಾಯ ಮಾಡಿರುವ ಬಿಜೆಪಿಗೆ ಪಾಠ ಕಲಿಸಿ ನನಗೆ ಬೆಂಬಲಿಸಬೇಕು ಎಂದು ಖೂಬಾ ಮನವಿ ಮಾಡಿದರು.

ಶರಣನಾಡು ಬಸವಕಲ್ಯಾಣ ಕ್ರಾಂತಿಯ ಪುಣ್ಯಭೂಮಿ. ಈಗ ಮತ್ತೆ ಕ್ರಾಂತಿ ಮಾಡುವ ಸಮಯ ಬಂದಿದೆ. ಇಂದು ಬಸವಕಲ್ಯಾಣ ಜನತೆಯ ಸ್ವಾಭಿಮಾನಕ್ಕೆ ಸವಾಲು ಎದುರಾಗಿದೆ. ಸ್ಥಳೀಯರಿಗೆ ಟಿಕೆಟ್ ನೀಡಲು ಕಡೆಗಣಿಸಿ ಬಿಜೆಪಿಯು ಕಲ್ಯಾಣದ ಜನತೆಗೆ ಅವಮಾನ ಮಾಡಿದೆ. ಈ ಚುನಾವಣೆ ಕ್ಷೇತ್ರದ ಪ್ರತಿಯೊಬ್ಬ ಮತದಾರರಿಗೆ ಪ್ರತಿಷ್ಠೆಯಾಗಿದೆ. ವಿರೋಧಿಗಳಿಗೆ ಪಾಠ ಕಲಿಸಿ ಸ್ಥಳೀಯರ ಮೇಲಾದ ಅನ್ಯಾಯ ಸರಿಪಡಿಸಬೇಕೆಂದು ಕೋರಿದರು.

ಉಪ ಚುನಾವಣೆಯಲ್ಲಿ ಹಡಪದ ಅಪ್ಪಣ್ಣ ಸಮಾಜದವರು ಸ್ಪರ್ಧಿಸಲು ನಾಮಪತ್ರ ಸಲ್ಲಿಸಿರುವುದು ಸಂತಸದ ಸಂಗತಿ. ಆದರೆ ಹಡಪದ ಸಮಾಜದವರು ಶಾಸಕರಾದ ನಂತರ ಸೇವಿಂಗ್ ಮಾಡುತ್ತಾರೆ ಎಂದು ಬಿಜೆಪಿ ಸಮಾವೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು ಭಾಷಣ ಮಾಡಿರುವುದು ಖಂಡನೀಯ. ಇದು ಹಡಪದ ಸಮಾಜಕ್ಕೆ ಮಾಡಿದ ಅವಮಾನ. ಸ್ವಾರ್ಥಕ್ಕಾಗಿ ಏನು ಬೇಕಾದರೂ ಮಾಡುವ, ಏನೇನೋ ಹೇಳಿಕೆ ನೀಡುವ ಬಿಜೆಪಿಯವರಿಂದ ಜನ ಎಚ್ಚರದಿಂದ ಇರಬೇಕು ಎಂದರು.

ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಮಾಜಿ ಅಧ್ಯಕ್ಷ ವೀರಣ್ಣಾ ಹಲಶೆಟ್ಟೆ, ಮುಖಂಡರಾದ ಕಾಳಿದಾಸ ಜಾಧವ್, ಇಸ್ಮಾಯಿಲ್ ಬೆಳಕುಣಿ, ಶರಣು ಗುದಗೆ, ಮುನ್ನಾಭಾಯಿ, ರಾಜಕುಮಾರ ಹೊಳಕುಂದೆ, ಸುಭಾಷ ಗಾಜರೆ, ಆಶೋಕ ಪಾಟೀಲ್ ಸಸ್ತಾಪೂರ, ಸೋಮು ಹೊಳಕುಂದೆ, ಸಂತೋಷ ಚಪಾತೆ, ಖಯಾಮೋದ್ದಿನ್, ಮುಪ್ಪಸಿಲ್ ಮಾಮು, ರಶೀದ್ ಖುರೇಶಿ, ಸಂಜು ಗಾಯಕವಾಡ, ಪ್ರಭು ಕಾಡಾದೆ, ಮಂಜು ಹೊಳಕುಂದೆ, ಬಸ್ಸು ಕೊಡಗೆ, ಮನೀಷ್ ಮಡಕೆ, ಬಸ್ಸು ಕೊರಕೆ, ಶಿವಕುಮಾರ ಬಿರಾದಾರ ಇದ್ದರು.