ಮಂಜುನಾಥ ಟಿ.ಭೋವಿ ಮೈಸೂರು
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಕೇವಲ ಒಂದು ವಾರ ಬಾಕಿ ಉಳಿದಿದೆ. ಆದಾಗ್ಯೂ ಪ್ರಚಾರ ಮಾತ್ರ ಎಲ್ಲೂ ಕಾಣುತ್ತಲೇ ಇಲ್ಲ!
ಪ್ರಚಾರದ ಅಭಾವದಿಂದ ದಸರಾ ಇನ್ನೂ ಕಳೆಗಟ್ಟಿಲ್ಲ. ಜತೆಗೆ, ದೇಶ-ವಿದೇಶದ ಪ್ರವಾಸಿಗರಿಗೆ ಸೂಕ್ತ ಮಾಹಿತಿ ನೀಡಿ ಆಕರ್ಷಿಸಲು ಆಗುತ್ತಿಲ್ಲ. ಕರೊನೋತ್ತರ ನಡೆಯುತ್ತಿರುವ ನಾಡಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಆದರೆ, ಈ ಹಿಂದಿನಂತಹ ಪ್ರಚಾರ ವೈಖರಿ ಗೋಚರವಾಗುತ್ತಿಲ್ಲ.
ಮೈಸೂರಿನಲ್ಲಿ ಪ್ರಚಾರ ಇಲ್ಲ:
ದಸರಾ ನಡೆಯುವ ಮೈಸೂರಿನಲ್ಲೇ ಪ್ರಚಾರ ಇಲ್ಲವಾಗಿದೆ. ಸಾಂಸ್ಕೃತಿಕ ನಗರಿಯನ್ನು ಒಂದು ಸುತ್ತು ಹಾಕಿ ಬಂದರೂ ಒಂದೇ ಒಂದು ಜಾಹೀರಾತಿನ ಫಲಕ, ಬ್ಯಾನರ್, ಹೋರ್ಡಿಂಗ್‌ಗಳು ಕಾಣುತ್ತಿಲ್ಲ. ಇದರಿಂದ ಸ್ಥಳೀಯರಿಗೆ ದಸರಾದಲ್ಲಿ ಏನು ನಡೆಯುತ್ತಿದೆ ಎಂಬುದೇ ತಿಳಿಯುತ್ತಿಲ್ಲ. ಇನ್ನು ಅನ್ಯ ಜಿಲ್ಲೆ ಮತ್ತು ರಾಜ್ಯದ ಪ್ರವಾಸಿಗರಿಗೆ ಹೇಗೆ ಮಾಹಿತಿ ದೊರೆಯಲು ಸಾಧ್ಯ ಎಂಬ ಪ್ರಶ್ನೆ ಎದುರಾಗಿದೆ.
ವಿಮಾನ ನಿಲ್ದಾಣದಲ್ಲೂ ಜಾಹೀರಾತಿಲ್ಲ:
ಈ ಹಿಂದೆ ಬೆಂಗಳೂರು ಸೇರಿದಂತೆ ವಿವಿಧ ವಿಮಾನ ನಿಲ್ದಾಣಗಳಲ್ಲಿ ದಸರಾ ಕುರಿತು ವಿಶಿಷ್ಟ ರೂಪದ ಜಾಹೀರಾತು ಕಾಣಸಿಗುತ್ತಿತ್ತು. ಆದರೆ, ಈ ಸಲ ಮೈಸೂರು ವಿಮಾನ ನಿಲ್ದಾಣದಲ್ಲೂ ಜಾಹೀರಾತು ಕಂಡುಬರುತ್ತಿಲ್ಲ. ಇದು ಪ್ರವಾಸಿಗರನ್ನು ಆಕರ್ಷಿಸಲು ತೊಡಕಾಗಿದೆ.
ಸಿಎಂ ಸೂಚನೆಗೆ ಕಿಮ್ಮತ್ತಿಲ್ಲ:
ಬೆಂಗಳೂರಿನಲ್ಲಿ ನಡೆದಿದ್ದ ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚೆಯಾಗಿತ್ತು. ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ದಸರಾ ಉತ್ಸವ ಕುರಿತು ವ್ಯಾಪಕ ಪ್ರಚಾರ ನೀಡುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದರು. ಆದರೆ, ಅದು ಕಾರ್ಯರೂಪಕ್ಕೆ ಬಂದಿಲ್ಲ.
ವೆಬ್‌ಸೈಟ್‌ನಲ್ಲೂ ಏನಿಲ್ಲ:
ದಸರಾಕ್ಕೂ 10 ದಿನ ಮುನ್ನ ದಸರಾ ವೆಬ್‌ಸೈಟ್ ಉದ್ಘಾಟನೆಯಾಗಿದೆ. ಆದರೆ ಅದು ‘ಹೊಸ ಬಾಟಲಿಯಲ್ಲಿ ಹಳೆಯ ಮದ್ಯ’ ಎಂಬ ಗಾದೆ ಮಾತಿನಂತೆ ಇದೆ. ಆಧುನಿಕ ಹಾಗೂ ಹೊಸ ರೂಪ ನೀಡಲಾಗಿದೆಯೇ ಹೊರತು, ವೆಬ್‌ಸೈಟ್‌ನಲ್ಲಿ ಹೆಚ್ಚಿನ ಮಾಹಿತಿಗಳು ಇಲ್ಲ. ದಸರಾ ಉದ್ಘಾಟಕರು, ಉದ್ಘಾಟನೆಯ ದಿನಾಂಕ, ಜಂಬೂಸವಾರಿ ನಡೆಯುವ ದಿನ, ಹಳೆಯ ಮಾಹಿತಿಯಾದ ದಸರಾ ಇತಿಹಾಸ ಬಿಟ್ಟರೆ ಅಲ್ಲಿ ಬೇರೇನೂ ಇಲ್ಲ. ಯುವ ದಸರಾ, ಸಾಂಸ್ಕೃತಿಕ ಕಾರ್ಯಕ್ರಮಗಳು, ಬರುವ ಕಲಾವಿದರು, ಅತಿಥಿಗಳ ಮಾಹಿತಿಯೂ ಇಲ್ಲ. ರೈತ ದಸರಾ, ಮಕ್ಕಳ ದಸರಾ, ಚಲನಚಿತ್ರೋತ್ಸವ ಇನ್ನಿತರ ದಸರಾ ಕುರಿತ ಮಾಹಿತಿಗಳ ಲಭ್ಯವಿಲ್ಲ. ಇದರಿಂದ ಸ್ಥಳೀಯರಿಗೆ, ಸಾರ್ವಜನಿಕರಿಗೆ ಮತ್ತು ಪ್ರವಾಸಿಗರಿಗೆ ದಸರಾದಲ್ಲಿ ಏನು ನಡೆಯುತ್ತಿದೆ ಎಂಬುದೇ ಅರಿವಿಗೆ ಬರುತ್ತಿಲ್ಲ.
ಖಾಸಗಿಯವರ ದುರ್ಲಾಭ:
ಪ್ರಚಾರ ನಿರ್ವಾತದ ಲಾಭವನ್ನು ಖಾಸಗಿ ಸಂಸ್ಥೆಗಳು ಪಡೆದುಕೊಳ್ಳುತ್ತಿವೆ. ದಸರೆ ಕುರಿತು ತಪ್ಪು ಮಾಹಿತಿ ನೀಡಿ ಪ್ರವಾಸಿಗರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದು, ಈ ಮೂಲಕ ವ್ಯಾವಹಾರಿಕ ಲಾಭ ಮಾಡಿಕೊಳ್ಳಲು ಹಪಹಪಿಸುತ್ತಿವೆ. ಸಾಮಾಜಿಕ ಜಾಲತಾಣ, ಯೂಟ್ಯೂಬ್‌ನಲ್ಲೂ ಸುಳ್ಳು ಸುದ್ದಿಗಳು, ಅತಿರಂಜಿತ-ಉತ್ಪ್ರೇಕ್ಷಿತ ಅಂಶಗಳು ವಿಜೃಂಭಿಸುತ್ತಿವೆ. ಇದಕ್ಕೆ ಅಂಕುಶ ಹಾಕಲು ಸರ್ಕಾರಿ ಸಂಸ್ಥೆಗಳ ಮೂಲಕ ಸರಿಯಾದ ಮಾಹಿತಿ ರವಾನಿಸಬೇಕಾಗಿದೆ.
ಪ್ರವಾಸೋದ್ಯಮಕ್ಕೆ ಹಿನ್ನಡೆ:
ಆರು ತಿಂಗಳ ಮುನ್ನವೇ ದಸರಾ ಕುರಿತು ಪ್ರಚಾರ ಮಾಡಿದರೆ ದೇಶ-ವಿದೇಶದಿಂದ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಾಗುತ್ತದೆ. ಆಗ ಮಾತ್ರ ಅವರು ಮೈಸೂರು ಪ್ರವಾಸ ಕೈಗೊಳ್ಳಲು ಯೋಜನೆ ಹಾಕಿಕೊಳ್ಳುತ್ತಾರೆ. ಆದರೆ ತರಾತುರಿಯಲ್ಲಿ ಬರಲು ಯಾರಿಗೂ ಆಗಲ್ಲ. ಪ್ರತಿ ವರ್ಷ ಈ ಸಮಸ್ಯೆಯನ್ನೂ ಪ್ರಸ್ತಾಪಿಸಿದ್ದರೂ ಯಾರೂ ಕಿವಿಗೊಡುವುದಿಲ್ಲ. ಕೊನೆಯಲ್ಲೇ ಅಬ್ಬರದ ಪ್ರಚಾರ ಮಾಡುತ್ತಾರೆ. ಅದು ಪ್ರಯೋಜನಕ್ಕೆ ಬರಲ್ಲ. ದಸರಾ ಅಂದರೆ ಸ್ಥಳೀಯರಿಗೆ ಮತ್ತ ಕರ್ನಾಟಕದವರಿಗೆ ಸೀಮಿತಗೊಳಿಸಲಾಗುತ್ತಿದೆ. ಇದರಿಂದ ದಸರಾ ಮತ್ತು ಮೈಸೂರು ಪ್ರವಾಸೋದ್ಯಮಕ್ಕೆ ಹಿನ್ನೆಡೆಯಾಗಿದೆ ಎಂಬುದು ಹೋಟೆಲ್ ಮಾಲೀಕರು ಅಸಮಾಧಾನವಾಗಿದೆ.
ತೆವಳುತ್ತಿರುವ ಪೂರ್ವಸಿದ್ಧತೆ:
ದಸರಾ ಮಹೋತ್ಸವದ ಸಿದ್ಧತೆಯೂ ಮಂದಗತಿಯಲ್ಲಿ ಸಾಗಿದೆ. ಪ್ರಮುಖ ಕಾರ್ಯಕ್ರಮವಾಗಿರುವ ಅರಮನೆ ವೇದಿಕೆಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಯುವ ದಸರಾಗೆ ಇನ್ನೂ ಸ್ಪಷ್ಟ ರೂಪ ದೊರೆತಿಲ್ಲ. ಕಲಾವಿದರ ಪಟ್ಟಿ ಅಂತಿಮವಾಗಿಲ್ಲ. ದಸರೆಗೆ ಈ ಸಲ ಕೊಟ್ಯಂತರ ರೂ. ಖರ್ಚು ಮಾಡಲಾಗುತ್ತಿದೆ. ಆದರೆ, ಪೂರ್ವಸಿದ್ಧತೆ ಸಮರ್ಪಕವಾಗಿ ನಡೆಯುತ್ತಿಲ್ಲ. ಮೈಸೂರಿನಲ್ಲಿ ತಯಾರಿ ಚಿತ್ರಣಗಳು ಕಾಣಸಿಗುತ್ತಿಲ್ಲ. ಪ್ರತಿ ವರ್ಷದಂತೆ ಈ ಬಾರಿಯೂ ದಸರಾ ಹಿನ್ನೆಲೆಯಲ್ಲಿ ಕೈಗೊಳ್ಳುವ ಕಾಮಗಾರಿಗಳನ್ನು ತರಾತುರಿಯಲ್ಲಿ ಕೈಗೊಳ್ಳುವುದು ನಿಶ್ಚಿತ. ಕಡೇ ಹಂತದಲ್ಲಿ ಈ ಕಾಮಗಾರಿಗಳ ಮೇಲ್ವಿಚಾರಣೆ ಮಾಡಲು ಸಾಧ್ಯವಾಗಲ್ಲ. ಹೀಗಾಗಿ ರಸ್ತೆ ಡಾಂಬರೀಕರಣ, ಗುಂಡಿ ಮುಚ್ಚುವುದು, ನಗರ ಸುಂದರೀಕರಣ ಕಾಮಗಾರಿಗಳು ಅತ್ಯಂತ ಕಳಪೆಯಾಗಿರುತ್ತವೆ ಎಂಬುದು ಸಾರ್ವಜನಿಕರ ಆಕ್ಷೇಪವಾಗಿದೆ.
ಯುವ ಸಂಭ್ರಮದಲ್ಲಿ ಜನರೇ ಇರಲಿಲ್ಲ:
ದಸರಾಗೆ ಮುನ್ನುಡಿ ಬರೆಯುವ ಮತ್ತು ಯುವ ಮನಸ್ಸುಗಳನ್ನು ಸೆಳೆಯುವ ‘ಯುವ ಸಂಭ್ರಮ’ಕ್ಕೂ ಎರಡು ದಿನ ಮುನ್ನ ಸುದ್ದಿಗೋಷ್ಠಿ ಮಾಡಿ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಅಲ್ಲಿಯವರೆಗೆ ಈ ಕುರಿತು ಮಾಹಿತಿಯೇ ಇರಲಿಲ್ಲ. ಯುವ ಸಂಭ್ರಮದ ಉದ್ಘಾಟನಾ ಕಾರ್ಯಕ್ರಮದ ಆರಂಭದಲ್ಲಿ ಸಭಿಕರೇ ಇರಲಿಲ್ಲ. ಇದರಿಂದ ಎರಡು ಗಂಟೆ ತಡವಾಗಿ ಕಾರ್ಯಕ್ರಮ ಶುರು ಮಾಡಲಾಯಿತು. ಇದುವೇ ಪ್ರಚಾರದ ಕೊರತೆಗೆ ಸಾಕ್ಷಿ.
ದಸರೆ ಆರಂಭಕ್ಕೆ ಇನ್ನು 7 ದಿನ ಮಾತ್ರ ಉಳಿದಿದ್ದರೂ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ನಿಗದಿಯಾಗಿಲ್ಲ. ಹೀಗಾದರೆ, ದೊಡ್ಡ ಕಲಾವಿದರನ್ನು ಕರೆಸಲು ಸಾಧ್ಯವಾಗುವುದಿಲ್ಲ. ಗುಣಮಟ್ಟ ಕಾಯ್ದುಕೊಳ್ಳಲು ಆಗುವುದಿಲ್ಲ. ನಾವು ಸಂಗೀತ ಕಾರ್ಯಕ್ರಮ ಆಯೋಜನೆಗೆ ಆರು ತಿಂಗಳ ಮೊದಲೇ ತಯಾರಿ ಮಾಡಿಕೊಳ್ಳುತ್ತೇವೆ. ಇಲ್ಲಿ ಅದಾವುದೂ ಕಾಣುತ್ತಿಲ್ಲ. ಎಲ್ಲವೂ ಕಾಟಾಚಾರಕ್ಕೆ ನಡೆಯುತ್ತದೆ. ನಾಡಹಬ್ಬ ಆಚರಣೆಯಲ್ಲಿ ಗಂಭೀರತೆಯೇ ಇಲ್ಲ.ಸಿ.ಆರ್.ಹಿಮಾಂಶು, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟಕರು
ದಸರಾ ಮಹೋತ್ಸವದ ತಯಾರಿ ನಡೆದಿದೆ. ಈ ಬಾರಿ 34.50 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಸಿದ್ಧತೆ ನಡೆದಿದೆ. 900 ಅರ್ಜಿಗಳು ಬಂದಿದ್ದು, ಅದರಲ್ಲಿ 280 ಕಾರ್ಯಕ್ರಮಗಳಿಗೆ ಅವಕಾಶ ಕೊಡಲಾಗುತ್ತದೆ. ಸ್ಥಳೀಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾದ ಕಲಾವಿದರಿಗೆ ವೇದಿಕೆ ಕಲ್ಪಿಸಲಾಗುವುದು.ಎಸ್.ಟಿ.ಸೋಮಶೇಖರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ