ನಂಜನಗೂಡು: ಕಾಂಗ್ರೆಸ್‌ನ ನಂಜನಗೂಡು ಅಭ್ಯರ್ಥಿ ದರ್ಶನ್ ಧ್ರುವನಾರಾಯಣ ಬೇಲದಕುಪ್ಪೆಯ ಶ್ರೀ ಮಹದೇವಶ್ವರಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಸೋಮವಾರದಿಂದ ಚುನಾವಣಾ ಪ್ರಚಾರಕ್ಕೆ ಧುಮುಕಿದರು.
ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಗ್ರಾಮದಲ್ಲಿರುವ ತಂದೆ ಧ್ರುವನಾರಾಯಣ ಅವರ ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ನೇರವಾಗಿ ಬೇಲದಕುಪ್ಪೆಗೆ ಭೇಟಿ ನೀಡಿದ ಅವರು, ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗೊಂದಿಗೆ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದರು.
ನಂತರ ತಾಲೂಕಿನ ಬಂಕಹಳ್ಳಿ, ಗಿರಿಜನ ಕಾಲನಿಗಳು, ಹಾದನೂರು ಒಡೆಯನಪುರ, ವೆಂಕಟಾಚಲಪುರ, ಹೆಡಿಯಾಲ, ಪಾರ್ವತಿಪುರ, ಗಣೇಶಪುರ, ಅಂಜನಾಪುರ, ಹಾಡ್ಯ, ಹಾಡ್ಯದಹುಂಡಿ, ಕಡಜಟ್ಟಿ, ಕಂದೇಗಾಲ ಸೇರಿದಂತೆ ಹಲವರು ಗ್ರಾಮಗಳಲ್ಲಿ ಸಂಚರಿಸಿ ಮತ ಬೇಟೆ ನಡೆಸಿದರು.
ಪ್ರಚಾರ ವೇಳೆ ಮಾತನಾಡಿದ ದರ್ಶನ್, ತಂದೆ ಧ್ರುವನಾರಾಯಣ ಅವರು ಇಲ್ಲ ಎಂಬುದನ್ನು ನಂಬಲೂ ಸಾಧ್ಯವಾಗುತ್ತಿಲ್ಲ. ನಮ್ಮ ತಂದೆ ಅಧಿಕಾರದಲ್ಲಿ ಇದ್ದಾಗಲೂ, ಇಲ್ಲದಿದ್ದಾಗಲೂ ಜನಸಾಮಾನ್ಯರ ಮಧ್ಯೆಯೇ ಇದ್ದರು. ಅಂತೆಯೇ ನಾನು ಕೂಡ ನಿಮ್ಮ ನೋವು ನಲಿವಿನಲ್ಲಿ ಜತೆಗಿರುತ್ತೇನೆ. ತಂದೆಯ ಹಾದಿಯಲ್ಲೇ ಜನಸೇವೆ ಮಾಡಬೇಕೆಂದುಕೊಂಡಿದ್ದೇನೆ ಎಂದರು.
ನನಗೆ ರಾಜಕಾರಣ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ಆದರೆ ತಂದೆಯವರ ಹಠಾತ್ ನಿಧನದಿಂದ ಕ್ಷೇತ್ರದ ಜನರು ಕಾಂಗ್ರೆಸ್‌ನಿಂದ ನನಗೆ ಟಿಕೆಟ್ ನೀಡುವಂತೆ ಒಕ್ಕೊರಲವಾಗಿ ಕೇಳಿಕೊಂಡ ಫಲವಾಗಿ ಹೈಕಮಾಂಡ್ ನನಗೆ ಟಿಕೆಟ್ ನೀಡಿದೆ. ಪಕ್ಷ ನನ್ನ ಮೇಲೆ ವಿಶ್ವಾಸವಿಟ್ಟು ಟಿಕೆಟ್ ನೀಡಿದೆ ಎಂದರು.
ಮಾಜಿ ಶಾಸಕ ಕಳಲೆ ಎನ್.ಕೇಶವಮೂರ್ತಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀಕಂಠು, ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಎಂ.ಲತಾಸಿದ್ದಶೆಟ್ಟಿ, ಬಿಸಿಎಂ ಅಧ್ಯಕ್ಷ ಕೆ.ಮಾರುತಿ, ತಾಪಂ ಮಾಜಿ ಅಧ್ಯಕ್ಷ ಬಿ.ಎಂ.ನಾಗೇಶ್‌ರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಂಠನಾಯ್ಕ ಹಲವರಿದ್ದರು.