ಕೊಳ್ಳೇಗಾಲ: ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿಕೆ ಖಂಡಿಸಿ ಪಟ್ಟಣದಲ್ಲಿ ಶುಕ್ರವಾರ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ, ಆದಿ ದ್ರಾವಿಡ ಮೂಲ ನಿವಾಸಿಗಳ ಹೋರಾಟ ಸಮಿತಿ ಹಾಗೂ ಹಲವು ಪ್ರಗತಿಪರ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಯಿತು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗ ಸೇರಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರ ಹಾಗೂ ಸಚಿವ ಅಮಿತ್ ಷಾ ವಿರುದ್ಧ ಅಕ್ರೋಶ ಹೊರಹಾಕಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ತಹಸೀಲ್ದಾರ್ ಬಸವರಾಜು ಪ್ರತಿಭಟನಾಕಾರ ಮನವಿ ಸ್ವೀಕರಿಸಿದರು.
ಸಾಹಿತಿ ಶಂಕನಪುರ ಮಹದೇವ ಮಾತನಾಡಿ, ಅಮಿತ್ ಷಾ ಹೇಳಿಕೆಯನ್ನು ಎಲ್ಲ ಸಂಘಟನೆಗಳು ಖಂಡಿಸುತ್ತವೆ. ಸಂವಿಧಾನ ಅಶಯದಂತೆ ಚುನಾಯಿತರಾಗಿ ಜನಪ್ರತಿನಿಧಿಯಾಗಿರುವ ಅವರು ಪ್ರಜಾಪ್ರಭುತ್ವ ವಿರೋಧಿ ಹೇಳಿಕೆ ನೀಡಿದ್ದಾರೆ. ಸಂಸತ್ತಿನ ಒಳಗಡೆ ಧರ್ಮ, ಜಾತಿ ಆಧಾರಿತ ಹೇಳಿಕೆಗಳನ್ನು ನೀಡುವ ಇಂತಹ ಗೃಹ ಸಚಿವರು ದೇಶಕ್ಕೆ ಅಗತ್ಯವಿಲ್ಲ. ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ದಲಿತ ಸಂಘರ್ಷ ಸಮಿತಿ ಸಂಚಾಲಕ ಸಿದ್ದರಾಜು ದೊಡ್ಡಿಂದುವಾಡಿ ಮಾತನಾಡಿ, ಸಂವಿಧಾನದಿಂದಲೇ ಈ ದೇಶದ ಜನರು ನಿಜವಾದ ಸ್ವರ್ಗದಲ್ಲಿ ಜೀವಿಸಲು ಅವಕಾಶ ದೊರೆತಿದೆ. ಆದರೆ, ಅಮಿತ್ ಷಾ ಅವರು ಅಂಬೇಡ್ಕರ್ ಹೆಸರನ್ನು ಹೇಳುವುದು ತಪ್ಪು ಎಂಬುವ ರೀತಿಯಲ್ಲಿ ಸದನದಲ್ಲಿ ಮಾತನಾಡಿರುವುದು ನಿಜಕ್ಕೂ ನೋವಿನ ಸಂಗತಿ. ಹೇಳಿಕೆಯನ್ನು ಎಲ್ಲ ಸಂಘಟನೆಗಳು ಖಂಡಿಸುತ್ತವೆ ಎಂದರು.
ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಸದಸ್ಯ ಮಂಜುನಾಥ್, ದಸಂಸ ಸಂಚಾಲಕ ದೊಡ್ಡಿಂದುವಾಡಿ ಸಿದ್ದರಾಜು, ಸಾಹಿತಿ ಶಂಕನಪುರ ಮಹದೇವ, ಆದಿ ದ್ರಾವಿಡ ಮೂಲ ಹೋರಾಟ ಸಮಿತಿ ಸುರೇಶ್, ಓಲೆ ಮಹದೇವ, ಪುಟ್ಟಸ್ವಾಮಿ, ಪುಟ್ಟರಾಜು, ಜಿಪಂ ಮಾಜಿ ಸದಸ್ಯ ಕಮಲ್, ಪಾಪಣ್ಣ, ದಲಿತ ಮುಖಂಡರಾದ ಸಿದ್ದಾರ್ಥ್, ಕೃಷ್ಣರಾಜ್, ನಟರಾಜು ಮಾಳಿಗೆ, ನಾಗರಾಜು, ಮುಳ್ಳೂರು ಮಂಜು, ಚಿನ್ನಸ್ವಾಮಿ ಮಾಳಿಗೆ, ಪೂಜಯ್ಯ, ಚಾಮರಾಜು, ಮುಖಂಡರಾದ ಇನಾಯತ್, ಮನ್ಸೂರ್ ಪಾಷ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ, ಸಮೀ ಷರೀಫ್, ಕರವೇ ಜಗದೀಶ್ ಶಾಸ್ತ್ರಿ, ರಮೇಶ್ ಮತ್ತಿತರಿದ್ದರು.