ಹಾಸನ: ಜಿಲ್ಲೆಯಲ್ಲಿ ಹೆಜ್ಜೆಗೊಂದರಂತೆ ಮದ್ಯದಂಗಡಿಗಳು ತಲೆ ಎತ್ತುತ್ತಿವೆ, ಬಾರ್ ಅಂಡ್ ರೆಸ್ಟೋರೆಂಟ್ (ಸಿಎಲ್-7) ಹೆಸರಲ್ಲಿ ಪರವಾನಗಿ ಪಡೆದುಕೊಂಡು ಬಹಿರಂಗವಾಗಿ ಮದ್ಯ ಮಾರಾಟ ಮಾಡುತ್ತಿರುವ ಕೇಂದ್ರಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಸದ ಪ್ರಜ್ವಲ್ ರೇವಣ್ಣ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಬುಧವಾರ ನಡೆದ ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಿಎಲ್-7 ಹೆಸರಿನಲ್ಲಿ ಲೈಸೆನ್ಸ್ ಪಡೆದವರು ಬಹಿರಂಗವಾಗಿ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುವ ಹಾಗಿಲ್ಲ. ರೆಸ್ಟೋರೆಂಟ್‌ನಲ್ಲಿ ಉಳಿಯುವವರಿಗೆ ಮಾತ್ರ ಮದ್ಯ ಸರಬರಾಜು ಮಾಡಲು ಅವಕಾಶ ಇದೆ. ಆದರೆ ಜಿಲ್ಲೆಯಲ್ಲಿ ಈ ನಿಯಮವನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವೈನ್ ಶಾಪ್‌ಗಳಲ್ಲಿ ಮಾತ್ರ ಬಹಿರಂಗವಾಗಿ ಮದ್ಯ ಮಾರಾಟ ಮಾಡಲು ಅವಕಾಶವಿದೆ. ಆದರೆ ಈಗ ಸಿಎಲ್-7 ಹೆಸರಲ್ಲಿ ಹಳ್ಳಿ ಹಳ್ಳಿಗಳಲ್ಲೂ ತಲೆ ಎತ್ತಿರುವ ಮದ್ಯದಂಗಡಿಗಳಿಂದಾಗಿ ಯುವಜನತೆ ಮದ್ಯ ವ್ಯಸನಿಗಳಾಗುತ್ತಿದ್ದಾರೆ. ಸಾಮಾಜಿಕ ಶಾಂತಿಗೆ ಧಕ್ಕೆ ಬಂದಿದೆ. ನಿಯಮ ಉಲ್ಲಂಘನೆ ಮಾಡುತ್ತಿರುವ ಬಾರ್ ಅಂಡ್ ರೆಸ್ಟೋರೆಂಟ್ ಪರವಾನಗಿ ರದ್ದುಪಡಿಸುವಂತೆ ಸೂಚನೆ ನೀಡಿದರು.
ಗಣಿಗಳ ವಿರುದ್ಧ ರೇವಣ್ಣ ಕಿಡಿ:
ಅಕ್ರಮ ಕಲ್ಲು ಗಣಿಗಾರಿಕೆಯಿಂದಾಗಿ ರಸ್ತೆ ಮತ್ತು ಸೇತುವೆಗಳು ಹಾಳಾಗುತ್ತಿವೆ. ಸಮೀಪದ ಮನೆಗಳ ಗೋಡೆಗಳು ಬಿರುಕು ಬಿಡುತ್ತಿವೆ. ಜನವಸತಿ, ರಸ್ತೆ ಮತ್ತು ಸೇತುವೆಗಳಿಂದ ನಿರ್ಧಿಷ್ಟ ದೂರದಲ್ಲಿ ಮಾತ್ರ ಗಣಿಗಾರಿಕೆಗೆ ಅನುಮತಿ ನೀಡಬೇಕು ಎಂಬ ನಿಯಮ ಇದ್ದರೂ ಅಕ್ರಮವಾಗಿ ಅನುಮತಿ ನೀಡಿರುವುದರಿಂದ ಸರ್ಕಾರ ಮತ್ತು ಸಾರ್ವಜನಿಕರು ನಷ್ಟ ಅನುಭವಿಸುವಂತಾಗಿದೆ. ತಕ್ಷಣ ಈ ರೀತಿಯ ನಿಯಮ ಮೀರಿ ಕಾರ್ಯಾಚರಣೆ ನಡೆಸುತ್ತಿರುವ ಗಣಿಗಳನ್ನು ಬಂದ್ ಮಾಡಿಸಬೇಕು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಹೊಳೆನರಸೀಪುರ ಶಾಸಕ ಎಚ್.ಡಿ. ರೇವಣ್ಣ ಕಿಡಿಕಾರಿದರು.
ಹೆದ್ದಾರಿ ಕಾಮಗಾರಿ ಅಪೂರ್ಣ:
ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಹಾಸನದಿಂದ ಮಾರನಹಳ್ಳಿವರೆಗೆ ಚತುಷ್ಪಥ ಹೆದ್ದಾರಿ ನಿರ್ಮಾಣ ಕಾಮಗಾರಿ ಮುಂಬರುವ ಮಾರ್ಚ್ ವೇಳೆಗೆ ಪೂರ್ಣಗೊಳ್ಳಬೇಕಿತ್ತು. ಆದರೆ ಸಕಲೇಶಪುರದವರೆಗೆ ಮಾತ್ರ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದ್ದು, ಸಕಲೇಶಪುರದಿಂದ ಮಾರನಹಳ್ಳಿವರೆಗೆ ಕಾಮಗಾರಿಯಲ್ಲಿ ಯಾವುದೇ ಪ್ರಗತಿ ಆಗಿಲ್ಲ. ಆದರೆ ಗುತ್ತಿಗೆದಾರರು ಕಾಮಗಾರಿಯನ್ನು ಅರ್ಧಕ್ಕೇ ನಿಲ್ಲಿಸಿ ಜಾಗ ಕಾಲಿ ಮಾಡುವ ಸೂಚನೆಗಳು ಕಂಡು ಬರುತ್ತಿವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಕ್ಷಣ ಈ ಬಗ್ಗೆ ಗಮನಹರಿಸಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸಕಲೇಶಪುರ ಶಾಸಕ ಎಚ್.ಕೆ. ಕುಮಾರಸ್ವಾಮಿ ಒತ್ತಾಯಿಸಿದರು.
ಜಾನುವಾರುಗಳ ರಕ್ಷಣೆಗೆ ಆಗ್ರಹ:
ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿರುವುದರಿಂದ ರೈತರು ತಮಗೆ ಅಗತ್ಯ ಇಲ್ಲದ ಕರುಗಳನ್ನು ಪಟ್ಟಣ ಪ್ರದೇಶಕ್ಕೆ ತಂದು ಬಿಟ್ಟು ಹೋಗುತ್ತಿರುವುದರಿಂದ ಅನಾಥ ಕರುಗಳು ಬೀದಿ ನಾಯಿಗಳಿಗೆ ಆಹಾರವಾಗುತ್ತಿವೆ. ಸರ್ಕಾರ ಗೊಶಾಲೆಗಳಿಗೆ ಹೆಚ್ಚಿನ ಸೌಲಭ್ಯ ಒದಗಿಸುವುದರ ಜೊತೆಗೆ ಅನಗತ್ಯ ರಾಸುಗಳನ್ನು ಗೋಶಾಲೆಗೆ ತಂದು ಬಿಡುವಂತೆ ರೈತರಲ್ಲಿ ಜಾಗೃತಿ ಮೂಡಿಸಬೇಕು. ಈ ಸಂಬಂಧ ಹಳ್ಳಿ ಹಳ್ಳಿಗಳಲ್ಲಿ ಪ್ರಚಾರ ನಡೆಸಬೇಕು ಎಂದು ಒತ್ತಾಯಿಸಿದರು.
ನಿರ್ಮಾಣ ಸಾಮಗ್ರಿಗಳ ಅಕ್ರಮ ಮಾರಾಟ:
ಜಿಲ್ಲೆಯಲ್ಲಿ ಸರ್ಕಾರದ ವತಿಯಿಂದ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸರಬರಾಜಾಗುತ್ತಿರುವ ಮರಳು, ಕಲ್ಲು, ಜಲ್ಲಿ ಮತ್ತಿತರ ನಿರ್ಮಾಣ ಸಾಮಗ್ರಿಗಳನ್ನು ಗುತ್ತಿಗೆದಾರರು ಖಾಸಗಿಯವರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಲೆಕ್ಕಪತ್ರ ನೀಡಬೇಕು, ಕಾಮಗಾರಿಯಲ್ಲಿ ನಡೆಯುವ ಗುಣಮಟ್ಟದ ಬಗ್ಗೆ ಹದ್ದಿನ ಕಣ್ಣು ಇಡುವ ಜೊತೆಗೆ ಕಾಮಗಾರಿಯಲ್ಲಿ ಲೋಪವಾಗದಂತೆ ಎಚ್ಚರ ವಹಿಸಬೇಕು ಎಂದು ಶಿವಲಿಂಗೇಗೌಡ ಆಗ್ರಹಿಸಿದರು.
ದೇವಾಲಯದ ಹಣ ದುರ್ಬಳಕೆ:
ನಿರ್ಮಿತಿ ಕೇಂದ್ರದ ಮೂಲಕ ದೇವಾಲಯಕ್ಕೆ ಮೀಸಲಿಟ್ಟಿರುವ ಮೂರು ಕೋಟಿ ರೂ. ಹಣವನ್ನು ಒಳಚರಂಡಿ ಕಾಮಗಾರಿಗೆ ಬಳಕೆ ಮಾಡಲಾಗಿದೆ. ಇದು ಕಾನೂನು ಬಾಹಿರ. ಈ ಬಗ್ಗೆ ಲೋಕಾಯುಕ್ತ ತನಿಖೆ ನಡೆಸಬೇಕು. ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ಧ ಜಿಲ್ಲಾಡಳಿತ ಎಚ್ಚರ ವಹಿಸಬೇಕು. ಅಲ್ಲದೆ ರಸ್ತೆಯಲ್ಲಿ ನಿಯಮಕ್ಕಿಂತ ಹೆಚ್ಚು ತೂಕದ ಮರಳು, ಕಲ್ಲು ಸಾಗಿಸುತ್ತಿದ್ದು, ಇದರಿಂದ ಹೊಸದಾಗಿ ನಿರ್ಮಾಣವಾಗಿರುವ ರಸ್ತೆ ಹಾಳಾಗಿವೆ. ಈ ಬಗ್ಗೆ ಸಾರಿಗೆ ಇಲಾಖೆ ಅಧಿಕಾರಿಗಳು ಗಮನ ಹರಿಸಿ ಹೆಚ್ಚುವರಿ ಲೋಡ್ ಮಾಡುವ ಲಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಎಚ್.ಡಿ. ರೇವಣ್ಣ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಜಿಲ್ಲಾ ಪಂಚಾಯಿತಿ ಸಿಇಒ ಕಾಂತರಾಜು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹರಿರಾಮ್ ಶಂಕರ್ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.