ಜಿಲ್ಲೆ

ಪ್ರಕ್ಷೇಕರಿಗೆ ರಂಜಿಸಿದ ಸಂಗೀತ, ನೃತ್ಯ

ಬೀದರ್: ಕರ್ನಾಟಕ ಕಲಾ ಪ್ರಶಸ್ತಿ ಪುರಸ್ಕೃತ ಸಂಗೀತ ಕಲಾ ಮಂಡಲದಿಂದ ನಗರದ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಉದಯೋನ್ಮುಖ ಪ್ರತಿಭಾವಂತ ಕಲಾವಿದರ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ ಭಾನುವಾರ ಸಂಜೆ ಜರುಗಿತು. ವಿವಿಧೆಡೆಯಿಂದ ಆಗಮಿಸಿದ ಕಲಾವಿದರು ಸಂಗೀತ ಸೇರಿ ವಿವಿಧ ಕಲಾ ಪ್ರಕಾರಗಳನ್ನು ಪ್ರಸ್ತುತಪಡಿಸಿ ಪ್ರೇಕ್ಷಕರಿಗೆ ರಂಜಿಸಿದರು.

ನೂಪುರ ನೃತ್ಯ ಅಕಾಡೆಮಿ ನಿರ್ದೇಶಕಿ ಉಷಾ ಪ್ರಭಾಕರ, ಕಲಾವಿದರಾದ ಸಿದ್ದುಸಾಯಿ ನಾನಕೇರಿ, ಅಶ್ವಿನಿ ಸ್ವಾಮಿ, ಶಿವಾನಿ ಸ್ವಾಮಿ, ಅಂಬರೀಶ್ ಶೀಲವಂತ, ಸರಸ್ವತಿ ಶೀಲವಂತ, ಅರವಿಂದ ಶೀಲವಂತ, ಕೇದಾರ ನಾನಕೇರಿ, ರೋಶನ್ ಕೊಳಾರ್, ಅನನ್ಯ ಪ್ರಭಾಕರ, ರಿತೇಶ್ ಕಾಳಶೆಟ್ಟಿ, ರೇಷ್ಮಾ ಶರ್ಮಾ, ಅಮಿತ್ ಜನವಾಡಕರ್, ವರುಣ ಮೈಲೂರಕರ್, ಚಂದ್ರಕಲಾ ಹಾರೂರಗೇರಿ ಸೇರಿದಂತೆ ಹಲವು ಕಲಾವಿದರು ಮಸ್ತ್ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ ನೀಡಿದರು.

ಹಿರಿಯ ಚಿಂತಕ ಪ್ರೊ.ದೇವೇಂದ್ರ ಕಮಲ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಸಂಗೀತ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಬೇಕಾಗಿದೆ. ಸಂಗೀತದಿಂದ ಮಾತ್ರ ಶಾಂತಿ, ನೆಮ್ಮದಿ ಸಾಧ್ಯ ಎಂದರು.

ಸಂಗೀತ ಕಲಾಮಂಡಲದ ಅಧ್ಯಕ್ಷರಾದ ಖ್ಯಾತ ಹಾರ್ಮೋನಿಯಂ ವಾದಕ ರಾಜೇಂದ್ರಸಿಂಗ್ ಪವಾರ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಕಾಲೇಜಿನ ಪ್ರಾಚಾರ್ಯ ಡಾ.ಜಗನ್ನಾಥ ಹೆಬ್ಬಾಳೆ, ಗ್ಲೋಬಲ್ ಸೈನಿಕ್ ಅಕಾಡೆಮಿ ಅಧ್ಯಕ್ಷ ಕರ್ನಲ್ ಶರಣಪ್ಪ ಸಿಕೆನಪುರ, ಕಲಬುರಗಿ ರಂಗಾಯಣ ಮಾಜಿ ನಿರ್ದೇಶಕ ಮಹೇಶ ಪಾಟೀಲ್, ಪ್ರೊ. ಎಸ್.ವಿ.ಕಲ್ಮಠ, ಪಂಡಿತ ರಾಮುಲು ಗಾದಗಿ, ಮಹಾರುದ್ರ ಡಾಕುಳಗಿ, ವೀರಭದ್ರಪ್ಪ ಉಪ್ಪಿನ್, ನಾಗರಾಜ ಜೋಗಿ ಇತರರಿದ್ದರು.