ದಾವಣಗೆರೆ: ಪರಿಸರ ಉಳಿದರೇನೇ ನಾವು. ಅವುಗಳಿಲ್ಲ ಎಂದರೆ ನಾವೂ ಉಳಿಯುವುದಿಲ್ಲ. ಹೀಗಾಗಿ ಪರಿಸರ ಉಳಿಸಿ, ಗಿಡ-ಮರಗಳನ್ನು ಬೆಳೆಸಿ ಪಾಲನೆ ಮಾಡಿ ಎಂದು ಸರ್ಕಾರದ ಪರಿಸರ ರಾಯಭಾರಿ ಸಾಲುಮರದ ತಿಮ್ಮಕ್ಕ ಹೇಳಿದರು.
ಪರಿಸರ ಸಂರಕ್ಷಣಾ ವೇದಿಕೆ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಹರಿಹರ ತಾಲೂಕಿನ ಮಿಟ್ಲಕಟ್ಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಹಾಗೂ ಪರಿಸರಪ್ರೇಮಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದಿ. ಸಾಲುಮರದ ವೀರಾಚಾರಿ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳಿಲ್ಲದ ನಾವು ಗಿಡಗಳನ್ನೇ ಮಕ್ಕಳಂತೆ ಸಾಕಿ ಬೆಳೆಸಿದೆವು. ಅವಿಂದು ಹೆಮ್ಮರ ಆಗಿ ಎಲ್ಲರಿಗೂ ನೆರಳು, ಹಣ್ಣು ನೀಡುತ್ತಿವೆ. ಗಿಡಗಳನ್ನು ಬೆಳೆಸಿದರೆ ಎಲ್ಲ ಭಾಗ್ಯವೂ ಸಿಗಲಿದೆ. ಹಾಗಾಗಿ ಪರಿಸರ ಬೆಳೆಸಲು ನಾವು ಆದ್ಯತೆ ನೀಡಬೇಕು ಎಂದು ಹೇಳಿದರು.
ದಿ. ವೀರಾಚಾರಿ ಅವರ ಮನೆಗೆ ಭೇಟಿ ನೀಡಿದ ಸಾಲುಮರದ ತಿಮ್ಮಕ್ಕ, ಅವರ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಎಲ್ಲರೂ ವೀರಾಚಾರಿಯಂತೆ ಪರಿಸರಪ್ರೇಮ ಬೆಳೆಸಿಕೊಳ್ಳಬೇಕು ಎಂದರು.
ಯುವ ಪರಿಸರ ಪ್ರಶಸ್ತಿ ಪುರಸ್ಕೃತ ಬಳ್ಳೂರು ಉಮೇಶ್ ಮಾತನಾಡಿ ವೀರಾಚಾರಿ ಅವರ ಪರಿಸರ ಸೇವೆ ಅನನ್ಯವಾದುದು. ಪರಿಸರ ಹಾಗೂ ಸಾಮಾಜಿಕ ಹೋರಾಟಕ್ಕೆ ತಮ್ಮ ಜೀವವನ್ನೇ ತ್ಯಾಗ ಮಾಡಿದ್ದಾರೆ. ಅವರು ಇನ್ನಷ್ಟು ಕಾಲ ಬದುಕಿ ಪರಿಸರ ಪ್ರೇಮಿಗಳಿಗೆ ದಾರಿದೀಪ ಆಗಬೇಕಾಗಿತ್ತು. ಪರಿಸರಯೋಧನನ್ನು ಕಳೆದುಕೊಂಡಂತಾಗಿದೆ ಎಂದರು.
ಬಡವರು, ದೀನ ದಲಿತರ ಹಸಿವು ನೀಗಿಸಲು ಸರ್ಕಾರ ನ್ಯಾಯ ಬೆಲೆ ಅಂಗಡಿಗಳನ್ನು ತೆರೆದಿದೆ. ಅದರಲ್ಲಿ ಕೆಲವು ಸೊಸೈಟಿಗಳು ಬಡವರಿಗೆ ಮೀಡಲಾದ ಅಕ್ಕಿಯನ್ನು ನೀಡದೆ ದುರ್ಬಳಕೆ ಮಾಡುತ್ತಿವೆ. ಇದು ದುರಾದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.
ವೀರಾಚಾರಿ ಅವರು ರಸ್ತೆ ಬದಿ ನೆಟ್ಟಿರುವ ಮರಗಳಿಗೆ ಬೆಸ್ಕಾಂ ಹಾಗೂ ಇತರ ಇಲಾಖೆಗಳು ತೊಂದರೆ ಮಾಡಬಾರದು. ಅವರ ಹೆಸರನ್ನು ಶಾಶ್ವತವಾಗಿ ಉಳಿಯುವ ಯೋಜನೆಯನ್ನು ಅನುಷ್ಠಾನಗೊಳಿಸಲು ಸಾಲುಮರದ ತಿಮ್ಮಕ್ಕನೊಂದಿಗೆ ಸಿಎಂ ಗಮನ ಸೆಳೆಯಲಾಗುವುದು ಎಂದರು.
ಮಿಟ್ಲಕಟ್ಟೆಯ ದೇವಸ್ಥಾನ ಸಮಿತಿ ಅಧ್ಯಕ್ಷ ಚಂದ್ರಪ್ಪ ಮಾತನಾಡಿ ವೀರಾಚಾರಿ ಇಲ್ಲದ ಊರಲ್ಲಿ ದೊಡ್ಡ ಶಕ್ತಿ ಕಳೆದಂತಾಗಿದೆ. ಸರ್ಕಾರ, ಅವರ ಕುಟುಂಬಕ್ಕೆ ನೆರವು ನೀಡಲಿ ಎಂದು ಮನವಿ ಮಾಡಿದರು.
ಅನಸೂಯಮ್ಮ ವೀರಾಚಾರಿ, ಪ್ರಾದೇಶಿಕ ಅರಣ್ಯಾಧಿಕಾರಿ ದೇವರಾಜ್, ಉಪ ಅರಣ್ಯಾಧಿಕಾರಿ ಇದಾಯತ್, ಸಾಮಾಜಿಕ ಉಪ ಅರಣ್ಯಾಧಿಕಾರಿ ರಾಮದಾಸ್, ಅರಣ್ಯ ರಕ್ಷಕರಾದ ಜ್ಯೋತಿ, ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ಗಿರೀಶ್ ದೇವರಮನೆ, ಕೆ.ಟಿ.ಗೋಪಾಲ ಗೌಡ್ರು, ಪ್ರಸನ್ನ ಬೆಳಕೆರೆ, ನಾಗರಾಜ್ ಸುರ್ವೆ, ಹನುಮಂತಪ್ಪ ಆರ್. ಬಿ, ಎಂ.ಜಿ.ಶ್ರೀಕಾಂತ್, ಸ್ಥಳೀಯ ಸದಸ್ಯರಾದ ನಾಗರಾಜ್ ಬಸಯ್ಯ, ಶಾಮಿಯಾನ ಸುರೇಶ್, ರಾಮನ ಗೌಡ್ರು ಇತರರಿದ್ದರು.
----