ಮೈಸೂರು: ಸಮಾಜದಲ್ಲಿ ಸಾಮುದಾಯಿಕ ಹಾಗೂ ಸಂಘಟನಾತ್ಮಕ ಕೃಷಿ ಪ್ರಜ್ಞೆ ಬೆಳೆಸಬೇಕು. ಅವಕಾಶ ಇರುವ ಸರ್ಕಾರಿ ಜಾಗದಲ್ಲಿ ಬೆಳಕಿನ ಬೇಸಾಯದ ಪ್ರಯೋಗ ಮಾಡಬೇಕು ಎಂದು ಸಾಹಿತಿ ರೂಪ ಹಾಸನ ಹೇಳಿದರು.
ನಗರದ ಇಂಜಿನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ಭಾನುವಾರ ಶಿವಮೊಗ್ಗದ ಅಹರ್ನಿಶಿ ಪ್ರಕಾಶನ ಪ್ರಕಟಿಸಿರುವ ಟಿಜಿಎಸ್ ಅವಿನಾಶ್ ಅವರು ರಚಿಸಿರುವ ‘ಬೆಳಕಿನ ಬೇಸಾಯ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೇಸಾಯದ ಪ್ರಯೋಗಕ್ಕೆ ಗ್ರಾಮ ಪಂಚಾಯಿತಿಗಳ ಮೂಲಕ ಸರ್ಕಾರ ಪ್ರೋತ್ಸಾಹ ನೀಡಬೇಕು. ಇದಕ್ಕೆ ಹೊಸ ಆಶಾಕಿರಣ ತೋರುವಲ್ಲಿ ಬೆಳಕಿನ ಬೇಸಾಯ ಕೃತಿ ಸಹಕಾರಿಯಾಗಿದೆ ಎಂದರು.
ಪ್ರಕೃತಿಗೆ ಹತ್ತಿರವಾದ ನೈಸರ್ಗಿಕ ಮೂಲದ ಕೃಷಿಯನ್ನು ಬೆಂಬಲಿಸಬೇಕಿದೆ. ಈ ಕುರಿತು ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಪ್ರಕಟಿಸಬೇಕು. ಕೃಷಿ ಕ್ಷೇತ್ರದಲ್ಲಿ ರಚನಾತ್ಮಕ, ಕ್ರಿಯಾಶೀಲ ಹಾಗೂ ಪ್ರಕೃತಿಗೆ ಹತ್ತಿರವಾದ ಪ್ರಯೋಗ ಕೈಗೊಳ್ಳಬೇಕಿದೆ. ಪ್ರಕೃತಿ ಧರ್ಮವನ್ನು ಅರ್ಥ ಮಾಡಿಕೊಳ್ಳಬೇಕು. ಅದನ್ನು ಪಾಲನೆ ಮಾಡಬೇಕಿದೆ. ಜೀವವೈವಿಧ್ಯವನ್ನೂ ಅರಿತುಕೊಳ್ಳಬೇಕಿದೆ. ಈಗಿನಿಂದಲೇ ಮಕ್ಕಳಿಗೆ ಪ್ರಕೃತಿಯ ಬಗ್ಗೆ ಅರ್ಥ ಮಾಡಿಸಬೇಕು. ಇಲ್ಲದಿದ್ದರೆ ಮನುಷ್ಯ ಸಂತತಿಗೆ ಉಳಿಗಾಲ ಇಲ್ಲ ಎಂದು ಎಚ್ಚರಿಸಿದರು.
ಲೇಖಕ ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಹಿಂದಿನ ಕಾಲದಲ್ಲಿ ಸಾಮ್ರಾಜ್ಯಗಳ ನಿರ್ಮಾಣಕ್ಕೆ ಬುನಾದಿ ಹಾಕಿಕೊಟ್ಟಿರುವುದು ಕೃಷಿ. ಅದನ್ನು ಲಾಭದಾಯಕ ಮಾಡಲು ನಿಸರ್ಗದೊಂದಿಗೆ ನಡೆಯಬೇಕು. ನಿಸರ್ಗದೊಂದಿಗೆ ಅನುಸಂಧಾನ ಮಾಡಬೇಕೇ ಹೊರತು ಅದರೊಂದಿಗೆ ಸಂಘರ್ಷಕ್ಕೆ ಇಳಿಯಬಾರದು. ಕೃಷಿಯು ಸುಲಭವಲ್ಲ. ವಿಪರೀತ ತಾಳ್ಮೆ ಮತ್ತು ಶ್ರಮವನ್ನು ಬೇಡುತ್ತದೆ. ಇದಕ್ಕಾಗಿ ದೃಢ ನಿಶ್ಚಯವೂ ಬೇಕಾಗಿದೆ ಎಂದು ಹೇಳಿದರು.
ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿದರು. ಕೃಷಿ ವಿಜ್ಞಾನಿ ಪ್ರಕಾಶ್ ಕಮ್ಮರಡಿ ಮಾತನಾಡಿದರು. ಲೇಖಕ ಟಿಜಿಎಸ್ ಅವಿನಾಶ್, ಅಹರ್ನಿಶಿ ಪ್ರಕಾಶನದ ಅಕ್ಷತಾ ಹುಂಚದಕಟ್ಟೆ, ಪತ್ರಕರ್ತ ಡಿ.ಆರ್.ಅಶೋಕ್‌ರಾಮ್ ಪಾಲ್ಗೊಂಡಿದ್ದರು.