ರಾಯಚೂರು: ಪ್ರಕೃತಿಯಿಂದ ಜೀವ ಮತ್ತು ಜೀವನ ಪಡೆದಿರುವ ಮನುಷ್ಯ ಪ್ರಕೃತಿಗೆ ಕೃತಾರ್ಥನಾಗಿರಬೇಕು. ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಬಂಧ, ಸ್ನೇಹ ಪೂರ್ವಕವಾಗಿರಬೇಕು ಎಂದು ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಮುಖ್ಯಸ್ಥೆ ಸ್ಮೀತಾ ಅಕ್ಕ ಹೇಳಿದರು.
ಸ್ಥಳೀಯ ಸಂಸದ ರಾಜಾ ಅಮರೇಶ್ವರ ನಾಯಕ ಕಚೇರಿ ಆವರಣದಲ್ಲಿ ಶಿಲ್ಪಾ ೌಂಡೇಷನ್ ಮತ್ತು ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರಕೃತಿ ವಂದನಾ ಮತ್ತು ವೃಕ್ಷ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜನರಲ್ಲಿ ಪ್ರಕೃತಿ ಬಗ್ಗೆ ಜಾಗೃತಿ ಮೂಡಿವು ಉದ್ದೇಶದಿಂದ ಪ್ರತಿವರ್ಷ ಕಾರ್ಯಕ್ರಮ ಆಚರಿಸಲಾಗುತ್ತಿದೆ. ನೀನು ನನ್ನ ರಕ್ಷಣೆ ಮಾಡು, ನಾನು ನಿನ್ನ ರಕ್ಷಣೆ ಮಾಡುತ್ತೇನೆ ಎಂಬ ಸಂಕಲ್ಪದೊಂದಿಗೆ ಗಿಡ, ಮರಗಳಿಗೆ ರಕ್ಷಾ ಬಂಧನ ಕಟ್ಟಿ ಕಾಪಾಡಲು ಮುಂದಾಗಬೇಕು.
ಮನುಷ್ಯ ಕೂಡಾ ಪ್ರಕೃತಿಯ ಒಂದು ಭಾಗ. ಪ್ರಕೃತಿಯಿಂದ ತನ್ನ ಅಗತ್ಯತೆಗಳನ್ನು ಪೂರೈಸಿಕೊಳ್ಳುತ್ತಾನೆ. ಆದರೆ ಮನುಷ್ಯ ಪ್ರಕೃತಿಗಿಂತ ತಾನು ಅತೀತ, ಶ್ರೇಷ್ಠ ಎಂಬ ಭಾವನೆ ಬೆಳೆಸಿಕೊಂಡಿರುವುದರಿಂದ ಪ್ರಕೃತಿಯನ್ನು ಹಾಳು ಮಾಡುತ್ತಿದ್ದಾರೆ. ಇದರಿಂದಾಗಿ ಸಾಕಷ್ಟು ಅಸಹಜ ಬದಲಾವಣೆಗಳಾಗುತ್ತಿವೆ. ತಾಪಮಾನ ಏರಿಕೆ ಮೂಲಕ ಪ್ರಕೃತಿ ತನ್ನ ಅಸ್ತಿತ್ವ ಉಳಿಸಿಕೊಳ್ಳುತ್ತಿದೆ ಎಂದು ಹೇಳಿದರು.
ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ ಮಾತನಾಡಿ, ತಂತ್ರಜ್ಞಾನದ ಸಾಧನೆ ಮೂಲಕ ಮನುಷ್ಯ ಚಂದ್ರನ ಮೇಲೆ ತಲುಪಲು ಸಾಧ್ಯವಾಗಿದೆ. ಅದರ ಜತೆಗೆ ಭೂಮಿಯ ಬಗ್ಗೆ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಯಾವ ಆಕಾಶ ಕಾಯದಲ್ಲೂ ಜೀವಿಗಳ ಅಸ್ತಿತ್ವದ ಕುರುಹುಗಳಿಲ್ಲ. ಇರುವ ಜೀವ ಗ್ರಹವನ್ನು ನಾವು ಕಾಪಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರೀನ್ ರಾಯಚೂರು ಕಾರ್ಯದರ್ಶಿ ರಾಜೇಂದ್ರಕುಮಾರ ಶಿವಾಳೆ, ಸ್ಕೌಟ್ಸ್ ಮತ್ತು ಗೈಡ್ಸ್ ಘಟಕದ ಅಧ್ಯಕ್ಷ ಸಾಗರ, ಮುಖಂಡರಾದ ಬಾಬುರಾವ್, ಕರಿಯಪ್ಪ ಕಲ್ಲೂರು, ಸತ್ಯನಾಥ, ಶ್ರೀನಿವಾಸ, ಗಣೇಶ, ಸಂಧ್ಯಾ ನಾಯಕ ಉಪಸ್ಥಿತರಿದ್ದರು.