ಕೆ.ಎಂ.ದೊಡ್ಡಿ: ಪ್ರಕೃತಿಯನ್ನು ಹಾಳುಗೆಡವಿ ಅಭಿವೃದ್ಧಿ ಮಾಡುವುದು ಬೇಡ. ಇದು ಪ್ರಾಣಿ ಪಕ್ಷಿಗಳ ಸಂಕುಲಗಳ ವಿನಾಶಕ್ಕೆ ಕಾರಣವಾಗುತ್ತದೆ ಎಂದು ಸಾಹಿತಿ ಹಾಗೂ ಇತಿಹಾಸ ಸಂಶೋಧಕ ತೈಲೂರು ವೆಂಕಟಕೃಷ್ಣ ಎಚ್ಚರಿಕೆ ನೀಡಿದರು.
ಸಮೀಪದ ಕೊಕ್ಕರೆ ಬೆಳ್ಳೂರಿನಲ್ಲಿ ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪ್ರವಾಸೋದ್ಯಮ ಇಲಾಖೆ, ಬೆಂಗಳೂರು ಭಾರತೀಯ ಪ್ರವಾಸೋದ್ಯಮ ಮಂತ್ರಾಲಯ ಹಾಗೂ ಡಬ್ಲುೃಡಬ್ಲುೃಎಫ್-ಇಂಡಿಯಾ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಹಕ್ಕಿ ಹಬ್ಬ-2023 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಕ್ಷಿಗಳು ಕೂರಲು ಮರಗಳ ಅವಶ್ಯಕತೆ ಇದ್ದು ಅರಣ್ಯ ಇಲಾಖೆ ಮರಗಳನ್ನು ಬೆಳೆಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಕೇವಲ ತೋರಿಕೆಗಾಗಿ ಹಕ್ಕಿ ಹಬ್ಬ ಕಾರ್ಯಕ್ರಮಗಳನ್ನು ಮಾಡುವುದು ತರವಲ್ಲ ಎಂದು ಅಸಮಾಧಾನವ್ಯಕ್ತಪಡಿಸಿದರು.
ಪಕ್ಷಿಧಾಮಕ್ಕೆ ದೇಶ-ವಿದೇಶಗಳಿಂದ ಹಕ್ಕಿಗಳು ಆಗಮಿಸುತಿದ್ದು, ಕೊಕ್ಕರೆ ಬೆಳ್ಳೂರು ವಿಶ್ವಪ್ರಸಿದ್ದ ತಾಣವಾಗಿದ್ದು, ಇದನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಸರ್ಕಾರ ಅಗತ್ಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಐತಿಹಾಸಿಕ ಕೆರೆಗಳ ಒತ್ತುವರಿ ಹೆಚ್ಚಾಗಿದೆ ಇದಲ್ಲದೆ ಅಭಿವೃದ್ಧಿ ನೆಪದಲ್ಲಿ ಬೆಟ್ಟಗಳನ್ನು ಕರಗಿಸುತಿದ್ದು, ಇತಿಹಾಸ ಸಾರುವ ಕೆರೆ ಮತ್ತು ಬೆಟ್ಟಗಳನ್ನು ಸಂರಕ್ಷಿಸುವ ಕೆಲಸವನ್ನು ಸಂಬಂಧಪಟ್ಟ ಇಲಾಖೆಗಳು ಮಾಡುತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಳಿಕ ಡಿಸಿಎಫ್ ಸೌರಬ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಕೊಕ್ಕರೆ ಬೆಳ್ಳೂರು ಒಂದೇ ಸಮುದಾಯ ಪಕ್ಷಿ ಕೇಂದ್ರ. ಇನ್ನೆಲ್ಲಿಯೂ ಇಲ್ಲ. ಪಕ್ಷಿಧಾಮವೂ ಕೂಡ ರಂಗನತಿಟ್ಟು ಒಂದೇ ಆಗಿದೆ. ಇವೆರಡರ ರಕ್ಷಣೆ, ಅಭಿವೃದ್ಧಿಯ ಹೊಣೆ ಸಮುದಾಯದ ಮೇಲೂ ಇದೆ. ಇವೆರಡೂ ಕೂಡ ಜಿಲ್ಲೆಯಲ್ಲಿ ಉತ್ತಮ ಪ್ರವಾಸಿ ತಾಣಗಳೂ ಆಗಿವೆ ಎಂದು ಹೇಳಿದರು.
ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕಿ ಐಶ್ವರ್ಯ, ಮಂಡ್ಯ ಜಿಲ್ಲೆಯಲ್ಲಿ ಮೋಜಿನ ಪ್ರವಾಸಿ ಕೇಂದ್ರಗಳು , ವನ್ಯಜೀವಿ ಪ್ರವಾಸಿ ಕೇಂದ್ರಗಳು, ಆಧ್ಯಾತ್ಮಿಕ ಪ್ರವಾಸಿ ಕೇಂದ್ರಗಳು, ಐತಿಹಾಸಿಕ ಪ್ರವಾಸಿ ಕೇಂದ್ರಗಳೂ ಸೇರಿದಂತೆ 8 ರೀತಿಯ ಪ್ರವಾಸಿ ಕೇಂದ್ರಗಳಿವೆ. ಎಲ್ಲ ರೀತಿಯ ಪ್ರವಾಸಿ ಕೇಂದ್ರಗಳಿಗೆ ಪ್ರವಾಸಿಗರು ಪ್ರವೇಶಿಸಲು ಕ್ಯೂಆರ್ ಕೋಡ್ ಕೂಡ ಮಾಡಲಾಗಿದೆ ಎಂದು ತಿಳಿಸಿದರು.
ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪ್ರವಾಸೋದ್ಯಮ ಇಲಾಖೆಯ ಕ್ಯೂಆರ್ ಕೋಡ್, ಪ್ರವಾಸಿ ತಾಣಗಳ ನಕ್ಷೆಯನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷೆ ಇಂದ್ರಮ್ಮ, ಉಪಾಧ್ಯಕ್ಷ ನಟರಾಜು, ಡಬ್ಲುೃಡಬ್ಲುೃಎಫ್‌ನ ಹಿರಿಯ ಯೋಜನಾಧಿಕಾರಿ ಲೋಹಿತ್, ಪ್ರವಾಸೋದ್ಯಮ ಮಂತ್ರಾಲಯದ ಮಾಹಿತಿ ಅಧಿಕಾರಿ ಗೋಪಾಲ್, ಹೆಜ್ಜಾರ್ಲೆ ಬಳಗದ ಅಧ್ಯಕ್ಷ ಲಿಂಗೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.