ಬಳ್ಳಾರಿ : ಪ್ರಕೃತಿ ಸಂರಕ್ಷಣೆ ಕೇವಲ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೆಲಸ ಮಾತ್ರವಲ್ಲದೇ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶೆ ಕೆ. ಜಿ. ಶಾಂತಿ ಹೇಳಿದರು.
ನಗರದ ಜಿಲ್ಲಾ ಅರಣ್ಯ ಇಲಾಖೆ ಕಚೇರಿ ಆವರಣದಲ್ಲಿ ನಡೆದ ಜಿಲ್ಲಾ ಅರಣ್ಯ ಇಲಾಖೆ ವೃತ್ತ ಹಾಗೂ ಜಿಲ್ಲಾ ವಿಭಾಗದ ವತಿಯಿಂದ ನಡೆದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅರಣ್ಯ ರಕ್ಷಣೆಗೆ ಅನೇಕ ಮಹನೀಯರು ತಮ್ಮ ಜೀವದ ಹಂಗು ತೊರೆದು ಪ್ರಕೃತಿಯ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ. ಕೆಲವರು ಪ್ರಾಣ ತ್ಯಾಗ ಬಲಿದಾನದಿಂದ ಹುತಾತ್ಮರಾಗಿದ್ದು, ಅಂತಹ ಹುತಾತ್ಮರನ್ನು ಪ್ರತಿದಿನ ಸ್ಮರಿಸಸಿಕೊಂಡು ಕಾಡು-ನಾಡು ಸಂರಕ್ಷಿಸುವ ಸಂಕಲ್ಪ ಹೊಂದಬೇಕು ಎಂದು ತಿಳಿಸಿದರು.
ಸಮಾಜ-ಅರಣ್ಯ ನಡುವಿನ ಸಂಘರ್ಷದಲ್ಲಿ ಮನುಷ್ಯನ ಸ್ವಾರ್ಥ ಇರುತ್ತದೆ ಹೊರತು, ಪ್ರಾಣಿ-ಪಕ್ಷಿಗಳ ಸ್ವಾರ್ಥ ಇರುವುದಿಲ್ಲ. ಮನುಷ್ಯರು ಅರಣ್ಯ ಪ್ರದೇಶಗಳನ್ನು ಕಾನೂನು ಬಾಹಿರವಾಗಿ ಅಕ್ರಮಿಸುತ್ತಾ ಅರಣ್ಯ ಕಬಳಿಸುವುದು, ಕಾಡು-ಪ್ರಾಣಿ ಸಂಕುಲಗಳನ್ನು ನಾಶಪಡಿಸುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ ಬೇಸರ ವ್ಯಕ್ತಪಡಿಸಿದರು.
ಡಿಸಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ ಮಿಶ್ರಾ ಮಾತನಾಡಿ, ಅರಣ್ಯ ಉಳಿವಿಗಾಗಿ ಪ್ರಾಣ ತ್ಯಾಗಮಾಡಿದ ಹುತಾತ್ಮರ ಶ್ರಮವನ್ನು ಸ್ಮರಿಸುವುದು ಅಗತ್ಯವಾಗಿದ್ದು, ಅರಣ್ಯ ರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ. ಅರಣ್ಯ ಇಲಾಖೆಯ ಸಿಬ್ಬಂದಿಯು ನಮ್ಮ ದೇಶ, ರಾಜ್ಯದ ಅರಣ್ಯ ಉಳಿವಿಗೆಗಾಗಿ ಮಹತ್ತರ ಕಾರ್ಯಚರಣೆ ಮಾಡುತ್ತಿದ್ದು, ನಮ್ಮ ಸುತ್ತಮುತ್ತಲಿನ ದಟ್ಟವಾದ ಅರಣ್ಯ ಪ್ರದೇಶದ ರಕ್ಷಣೆಯಲ್ಲಿ ಪಾತ್ರ ಮುಖ್ಯವಾಗಿದೆ ಎಂದರು.
ಅರಣ್ಯ ಇಲಾಖೆಯ ವಿಭಾಗದ ಉಪ ಸಂರಕ್ಷಣಾಧಿಕಾರಿ ಸಂದೀಪ್ ಎಚ್. ಸೂರ್ಯವಂಶಿ, ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರು ಮಾತನಾಡಿದರು. ಇದೇ ವೇಳೆ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಅಂಗವಾಗಿ ಹುತಾತ್ಮರ ಸ್ಮಾರಕದಲ್ಲಿನ ಹುತಾತ್ಮರ ಭಾವಚಿತ್ರಕ್ಕೆ ಸಕಲ ಗೌರವದೊಂದಿಗೆ ಹೂಗುಚ್ಛ ಸಮರ್ಪಣೆಯೊಂದಿಗೆ ನಮನ ಸಲ್ಲಿಸಲಾಯಿತು.
ಅರಣ್ಯ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಫೈರ್ ಪಾರ್ಟಿ, ಗಾಳಿಯಲ್ಲಿ ಮೂರು ಸುತ್ತು ಕುಶಾಲತೋಪು ಹಾರಿಸಿ ಮೌನಾಚರಣೆ ನಡೆಸಿ, ರಾಷ್ಟಗೀತೆ ಹಾಡಿ, ಅರಣ್ಯ ಹುತಾತ್ಮರಿಗೆ ಗೌರವ ಸಲ್ಲಿಸಲಾಯಿತು.