ಹಾಸನ: ಪ್ರಕೃತಿಯು ನಮಗೆ ಎಲ್ಲವನ್ನೂ ನೀಡಿದೆ. ಆದರೆ ಮಾನವನ ದುರಾಸೆಗೆ ಪ್ರಕೃತಿಯು ನಾಶವಾಗುತ್ತಿದೆ. ಪ್ರತಿಯೊಬ್ಬರೂ ಪರಿಸರವನ್ನು ಸಂರಕ್ಷಿಸುವ ಮೂಲಕ ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹೇಮಾವತಿ ಅವರು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಅರಣ್ಯ ಇಲಾಖೆ ಸಹಯೋಗದಲ್ಲಿ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಶನಿವಾರ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಪರಿಸರ ದಿನವನ್ನು ಪ್ರತ್ಯೇಕವಾಗಿ ಆಚರಣೆ ಮಾಡುವುದರಲ್ಲಿ ಅರ್ಥವಿಲ್ಲ. ನಮಗೆ ಪ್ರತಿ ದಿನವೂ ಪರಿಸರ ದಿನವಾಗಿರಬೇಕು. ಪರಿಸರವನ್ನು ರಕ್ಷಿಸುವ ಬಗ್ಗೆ ಪ್ರತಿಯೊಬ್ಬರಿಗೂ ಕಾಳಜಿ ಇರಬೇಕು. ಮಾನವ ತನ್ನ ದುರಾಸೆ, ದುರಾಲೋಚನೆಗಳಿಗೆ ಪ್ರಕೃತಿಯನ್ನು ನಿರಂತರವಾಗಿ ಹಾಳುಗೆಡವುತ್ತಿದ್ದಾನೆ. ಭೂಮಿಯು ಎಲ್ಲವನ್ನೂ ಸಹಿಸಿಕೊಂಡರೂ ಸಹ ಒಮ್ಮೊಮ್ಮೆ ಮಾನವನ ಮೇಲೆ ಪ್ರಕೃತಿ ವಿಕೋಪಗಳ ಮೂಲಕ ಹಗೆ ತೀರಿಸಿಕೊಂಡು ಸಮತೋಲನ ಕಾಪಾಡಿಕೊಳ್ಳುತ್ತಿದೆ ಎಂದರು.
ನಾವು ಹುಟ್ಟುವ ಮುಂಚೆಯೂ ಕೋಟ್ಯಂತರ ವರ್ಷಗಳ ಹಿಂದೆಯೂ ಭೂಮಿ ಇತ್ತು. ಈಗಲೂ ಇದೆ. ನಮ್ಮ ನಂತರವೂ ಇರುತ್ತದೆ. ಆದ್ದರಿಂದ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಇಂದು ಮನುಷ್ಯ ತನ್ನ ವಾಸ್ತವ್ಯವನ್ನು ವಿಸ್ತರಿಸಿ ಕಾಡನ್ನು ನಾಶ ಮಾಡುತ್ತಿರುವುದರಿಂದ ಜಾಗತಿಕ ತಾಪಮಾನ ಹಾಗೂ ಹವಾಮಾನ ವೈಪರಿತ್ಯದಂತಹ ಸಮಸ್ಯೆಗಳು ತಲೆದೋರುತ್ತಿವೆ. ಇದರಿಂದ ಭೂಮಿಯ ಧ್ರುವ ಪ್ರದೇಶಗಳಲ್ಲಿರುವ ಹಿಮಬಂಡೆಗಳು ಕರಗಿ ಸಮುದ್ರದ ನೀರಿನ ಮಟ್ಟ ಹೆಚ್ಚುವ ಮೂಲಕ ಸಮುದ್ರದ ತಡಿಯಲ್ಲಿರುವ ಪ್ರದೇಶಗಳು ನೀರಿನಲ್ಲಿ ಮುಳುಗುತ್ತಿದೆ. ಮರುಭೂಮಿಯಲ್ಲಿ ಮಳೆಯಾಗುತ್ತಿದೆ. ಇವೆಲ್ಲ ಆಸಹಜವಾಗಿದ್ದು, ಅಪಾಯದ ಮುನ್ಸೂಚನೆ ಎಂಬುದನ್ನು ಅರಿಯಬೇಕು. ಪ್ರತಿಯೊಬ್ಬರೂ ಒಂದು ಮರ ಕಡಿದರೆ ಹತ್ತು ಗಿಡಗಳನ್ನು ನೆಟ್ಟು ಪೋಷಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಜಿ.ಕೆ. ದಾಕ್ಷಾಯಿಣಿ ಅವರು ಮಾತನಾಡಿ, ಪರಿಸರ ಸಂರಕ್ಷಣೆಯ ಬಗ್ಗೆ ಸಂವಿಧಾನದಲ್ಲಿ ಉಲ್ಲೇಖಿಸಿದ್ದು ಅದು ಪ್ರತಿಯೊಬ್ಬ ಭಾರತೀಯರ ಕರ್ತವ್ಯವಾಗಿದೆ. ಇದನ್ನು ಕಾನೂನು ಸೇವೆಗಳ ಪ್ರಾಧಿಕಾರವು ಅರಿವು ಮೂಡಿಸುತ್ತಿದ್ದು ಅದಕ್ಕೆ ಮುನ್ನುಡಿಯಾಗಿ ನ್ಯಾಯಾಲಯ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಸಲುವಾಗಿ ಪ್ರಧಾನ ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ಪರಿಸರ ದಿನವನ್ನು ಗಿಡ ನೆಡುವ ಮೂಲಕ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷರಾದ ಡಿ.ಟಿ. ಪ್ರಸನ್ನ ಮಾತನಾಡಿ, ವಕೀಲರ ಸಂಘವು ಪರಿಸರ ಕಾಳಜಿ ಇಟ್ಟುಕೊಂಡು ಪ್ರತ್ಯೇಕವಾಗಿ ಪರಿಸರ ಸಮಿತಿಯನ್ನು ರಚಿಸಿದ್ದು ಜಿಲ್ಲಾ ನ್ಯಾಯಾಂಗದ ಸಮನ್ವಯತೆಯಲ್ಲಿ ನ್ಯಾಯಾಲಯದ ಆವರಣದಲ್ಲಿ ಸಾಕಷ್ಟು ಮರಗಿಡಗಳನ್ನು ನೆಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ನ್ಯಾಯಾಧೀಶರಾದ ಬಿ.ಎಂ.ಶೈಲಾ, ಮಹಮ್ಮದ್ ಅಶ್ರಫ್ ಹ್ಯಾರಿಸ್, ಆನಂದ, ಎಚ್.ಆರ್.ರವಿಕುಮಾರ್ , ಎಚ್.ಎಂ.ದೇವರಾಜು, ವಕೀಲರ ಸಂಘದ ಪರಿಸರ ಸಮಿತಿಯ ಸದಸ್ಯ ಮಂಜುನಾಥ್, ವಕೀಲರು ಮತ್ತು ಹಸಿರು ಭೂಮಿ ಪ್ರತಿಷ್ಠಾನದ ಕಾರ್ಯದರ್ಶಿ ಎಂ. ಬಿ. ಗಿರಿಜಾಂಬಿಕಾ, ಕಾನೂನು ನೆರವು ಅಭಿರಕ್ಷಕರಾದ ಎಸ್.ಪಿ.ಆನಂದ , ಆರ್‌ಎಫ್‌ಒ ಲಷ್ಕರ್ ನಾಯಕ್ ಹಾಗು ನ್ಯಾಯಾಲಯ ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.