ಜಿಲ್ಲೆ

ಪ್ರಕೃತಿ ಆಸ್ವಾದಿಸಲು ಮೌಂಟನ್ ಬೈಕಿಂಗ್

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಂಕು-ಡೊಂಕಾದ, ಕಲ್ಲು ಮುಳ್ಳುಗಳಿಂದ ಕೂಡಿದ ಹಾದಿಯಲ್ಲಿ ನಡೆದು ಸಾಗುವುದೇ ಸಾಹಸದ ಕೆಲಸ. ಅಂತಹ ರಸ್ತೆಯಲ್ಲಿ ಸೈಕಲ್ ಚಲಾಯಿಸುವುದಂತೂ ದೂರದ ಮಾತೇ ಸರಿ. ಆದರೆ ಇಲ್ಲಿನ ಮಾತ್ರ ಯುವಕರು ಅತ್ಯಂತ ಉತ್ಸಾಹದಿಂದ ಇಂತಹ ರಸ್ತೆಯಲ್ಲಿ ಸೈಕಲ್ ಚಲಾಯಿಸಿ ಪರಿಸರ ಆಸ್ವಾದಿಸುತ್ತಿದ್ದಾರೆ.
ನಗರದಲ್ಲಿ ಏರ್ಪಡಿಸಿರುವ 26ನೇ ರಾಷ್ಟ್ರೀಯ ಯುವ ಜನೋತ್ಸವ ನಿಮಿತ್ತ ಇಲ್ಲಿನ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಾಹಸ ಕ್ರೀಡಾ ಚಟುವಟಿಕೆಗಳ ವಿಭಾಗದಲ್ಲಿ ಮೌಂಟನ್ ಬೈಕಿಂಗ್ ಸಹ ಒಂದಾಗಿದೆ. ಬೆಂಗಳೂರಿನ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ವತಿಯಿಂದ ಸಾಹಸ ಕ್ರೀಡೆ ನಡೆಸಲಾಗುತ್ತಿದೆ.
ಕರ್ನಾಟಕ ವಿಶ್ವ ವಿದ್ಯಾಲಯದ ಸುತ್ತಲಿನ ಗುಡ್ಡು ಗಾಡು ಪ್ರದೇಶದ ಸುಮಾರು 10 ಕಿ.ಮೀ. ವ್ಯಾಪ್ತಿಯ ರಸ್ತೆ ಗುರುತಿಸಿ ಮೌಂಟನ್ ಬೈಕಿಂಗ್ ನಡೆಸಲಾಗುತ್ತಿದೆ. ಅಕಾಡೆಮಿಯ ಒಟ್ಟು 28 ಸೈಕಲ್‌ಗಳೊಂದಿಗೆ ರೈಡಿಂಗ್ ನಡೆಸಲಾಗಿದೆ. ಶುಕ್ರವಾರದಿಂದ ಆರಂಭವಾಗಿದ್ದು, ಈವರೆಗೂ ಸುಮಾರು 170 ಅಭ್ಯರ್ಥಿಗಳು ಇದರ ಪ್ರಯೋಜನ ಪಡೆದಿದ್ದಾರೆ.
ನಿತ್ಯವೂ ಒಂದು ಬ್ಯಾಚ್‌ನಲ್ಲಿ 24 ಜನರಂತೆ ಅಂದಾಜು 6 ಬ್ಯಾಚ್‌ಗಳಲ್ಲಿ ರೈಡಿಂಗ್ ನಡೆಸಲಾಗುತ್ತದೆ. 24 ಅಭ್ಯರ್ಥಿಗಳೊಂದಿಗೆ ಮೂವರು ಮಾರ್ಗದರ್ಶಕರು ತೆರಳುತ್ತಾರೆ. ನೋಂದಣಿ ಮಾಡಿಸಿದ ಪ್ರತಿನಿಧಿಗಳ ಗುರುತಿನ ಚೀಟಿ ಗಮನಿಸಿ ಅವರಿಗೆ ಅವಕಾಶ ನೀಡಲಾಗುತ್ತದೆ. ಇದಲ್ಲದೆ ಹೊರಗಿನ ಜನರಿಗೆ ಹಣ ಪಡೆದು ಅವಕಾಶ ನೀಡಲಾಗುತ್ತಿದೆ. ರೈಡಿಂಗ್‌ಗೆ ತೆರಳು ಜನಪ್ರತಿನಿಧಿಗಳಿಗೆ ಸಮಸ್ಯೆ ಆಗದಂತೆ ಎಲ್ಲ ರೀತಿಯ ಎಚ್ಚರಿಕೆ ವಹಿಸಲಾಗಿದೆ ಎನ್ನುತ್ತಾರೆ ಅಕಾಡೆಮಿಯ ರಾಜೇಂದ್ರ.
ಮೌಂಟನ್ ಬೈಕಿಂಗ್‌ಗೆ ಸಾಕಷ್ಟು ಜನರು ಆಸಕ್ತಿ ವಹಿಸಿದ್ದರಿಂದ ದಿನೇ ದಿನೇ ಬ್ಯಾಚ್‌ಗಳ ಸಂಖ್ಯೆಯಲ್ಲಿ ಏರಿಕೆ ಆಗುತ್ತಲೇ ಇದೆ. ವಿವಿಧ ರಾಜ್ಯಗಳಿಂದ ಆಗಮಿಸಿರುವ ಯುವಕರು ನಗರದ ಪರಿಸರಕ್ಕೆ ಮನಸೋತಿದ್ದು, ಮೌಂಟನ್ ಬೈಕಿಂಗ್ ಮೂಲಕ ಇಲ್ಲಿನ ಪ್ರಾಕೃತಿಕ ಸೊಬಗು ಸವಿದು ಆನಂದಿಸುತ್ತಿದ್ದಾರೆ.
-----ಕೋಟ್----
ಯುವ ಜನೋತ್ಸವ ಏರ್ಪಡಿಸಿರುವ ಸ್ಥಳ ಅತ್ಯಂದ ಸುಂದವಾಗಿದೆ. ಇಲ್ಲಿನ ತಂಪಾದ ವಾತಾವರಣ ಮನಸ್ಸಿಗೆ ಮುದ ನೀಡುತ್ತದೆ. ಇಂತಹ ಸ್ಥಳದಲ್ಲಿ ಮೌಂಟನ್ ಬೈಕಿಂಗ್ ಮಾಡುತ್ತಿರುವುದು ಅತ್ಯಂತ ಖುಷಿಯಾಗಿದೆ.

  • ಲಕ್ಷ್ಮೀ, ಆಂಧ್ರಪ್ರದೇಶ