ಜಿಲ್ಲೆ

ಪ್ರಕರಣಗಳ ರಾಜಿ, ಸಂಧಾನ ಒಳಿತು

ನಾಗಮಂಗಲ: ಕಾನೂನಾತ್ಮಕ ಪ್ರಕ್ರಿಯೆಗಳ ಮೂಲಕ ಆಗಬಹುದಾದ ಪ್ರಕರಣಗಳ ರಾಜಿಯಿಂದ ದಾವೆಗೆ ಸಂಬಂಧಿಸಿದ ಉಭಯತ್ರರಿಗೂ ಗೆಲುವು ಸಿಗಲಿದೆ ಎಂದು ಜೆಎಂಎಫ್‌ಸಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಯೋಗೇಶ್ ತಿಳಿಸಿದರು.

ನ.12ರಂದು ಆಯೋಜಿಸಿರುವ ರಾಷ್ಟ್ರೀಯ ಲೋಕ ಅದಾಲತ್‌ಗೆ ಸಂಬಂಧಿಸಿದಂತೆ ಪಟ್ಟಣದ ನ್ಯಾಯಾಲಯದ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ರಾಜಿ ಸಂಧಾನದ ಮೂಲಕ ಇತ್ಯರ್ಥವಾಗುವ ಪ್ರಕರಣಗಳಿಂದ ಸೋಲು ಅಥವಾ ಗೆಲುವು ಎಂಬುದಕ್ಕಿಂತ ಉಭಯತ್ರರ ಸಾಮರಸ್ಯ ಗಟ್ಟಿಯಾಗಲಿದೆ. ಕೆಲವೊಂದು ಪ್ರಕರಣಗಳಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಾಗ ಇರಬಹುದಾದ ಆಸಕ್ತಿ, ನ್ಯಾಯಾಲಯದಲ್ಲಿ ವಿಚಾರಣೆಯಾಗುವ ವೇಳೆಗೆ ಕ್ಷೀಣಿಸಿರುತ್ತದೆ. ಇದರಿಂದ ನ್ಯಾಯಾಲಯದ ಕಲಾಪದ ಸಮಯ ವ್ಯರ್ಥವಾಗುತ್ತದೆ. ಯಾವುದೇ ಪ್ರಕರಣದ ವಿಚಾರಣೆಯ ನಂತರ ಸಾಕ್ಷಿಗಳ ಆಧಾರದಲ್ಲಿ ದೂರುದಾರ ಅಥವಾ ಎದುರುದಾರಲ್ಲಿ ಒಬ್ಬರ ಪರವಾಗಿ ಮಾತ್ರ ತೀರ್ಪು ಪ್ರಕಟವಾಗಲಿದೆ. ಆದರೆ, ರಾಜಿ ಸಂಧಾನದ ಮೂಲಕ ಇತ್ಯರ್ಥವಾಗುವ ಪ್ರಕರಣಗಳಲ್ಲಿ ಉಭಯತ್ರರ ಪರವಾಗಿ ಇತ್ಯಾರ್ಥವಾಗಲಿದೆ ಎಂದು ಹೇಳಿದರು.

ಚೆಕ್‌ಬೌನ್ಸ್, ವಿವಾಹ ವಿಚ್ಛೇದನ, ಹಲ್ಲೆ, ಕಳ್ಳತನ, ಅಪಘಾತ ಸೇರಿದಂತೆ ಮತ್ತಿತರ ದಾವೆಗಳು ಸೇರಿದಂತೆ ನಾಗಮಂಗಲದ 4 ನ್ಯಾಯಾಲಯಗಳಲ್ಲಿ ಒಟ್ಟು 9,628 ಪ್ರಕರಣಗಳು ಇತ್ಯರ್ಥವಾಗಬೇಕಿವೆ. ಕಳೆದ 9 ತಿಂಗಳಿಂದ ಚೆಕ್‌ಬೌನ್ಸ್ ಪ್ರಕರಣಗಳ ರಾಜಿ ಸಂಧಾನದ ಇತ್ಯರ್ಥಕ್ಕೆ ಒತ್ತು ನೀಡಲಾಗುತ್ತಿದೆ. ರಾಜಿ ಸಂಧಾನದಿಂದ ಶೀಘ್ರಗತಿಯಲ್ಲಿ ನ್ಯಾಯ ದೊರಕಲಿದೆ. ಬ್ಯಾಂಕ್‌ಗಳಿಗೆ ಸಂಬಂಧಿತ ಪ್ರಕರಣಗಳನ್ನೂ ರಾಜಿ ಮೂಲಕ ಇತ್ಯರ್ಥಪಡಿಸಲಾಗುತ್ತಿದೆ. ಒಟ್ಟಾರೆಯಾಗಿ ನಿಯಮಾನುಸಾರ ಅವಕಾಶವಿರುವ ಪ್ರಕರಣಗಳು ರಾಜಿ ಮೂಲಕ ಇತ್ಯರ್ಥವಾದರೆ, ಹಣ ಮತ್ತು ಸಮಯದ ಉಳಿವಿಗಿಂತ ನೆಮ್ಮದಿಯ ಬದುಕಿಗೆ ದಾರಿಯಾಗಲಿದೆ ಎಂದರು.

ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಗಿರಿಗೌಡ ಮಾತನಾಡಿ, ರಾಜಿ ಸಂಧಾನ ಯಶಸ್ವಿಗೆ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಮಾಧ್ಯಮಗಳ ಸಹಕಾರ ಅತ್ಯಗತ್ಯ. ರಾಜಿಯಿಂದ ಬಗೆಹರಿಯುವ ಪ್ರಕರಣಗಳಿಂದ ನಮಗೆ ಸೋಲುಂಟಾಗಿದೆ ಎಂಬ ಕೀಳರಿಮೆ ಕಕ್ಷಿದಾರರಲ್ಲಿ ಬರಬಾರದು. ಈ ನಿಟ್ಟಿನಲ್ಲಿ ವಕೀಲರ ಸಂಘ ಹಾಗೂ ಪೊಲೀಸ್ ಇಲಾಖೆಗಳ ಜತೆ ಮಾಧ್ಯಮಗಳು ಕೂಡ ಸಹಕರಿಸಬೇಕಿದೆ ಎಂದರು. ವಕೀಲರ ಸಂಘದ ಅಧ್ಯಕ್ಷ ಟಿ.ಕೆ.ರಾಮೇಗೌಡ, ವೃತ್ತ ನಿರೀಕ್ಷಕ ಸುಧಾಕರ್, ಪಿಎಎಸ್‌ಐಗಳಾದ ರವಿಶಂಕರ್, ಶ್ರೀಧರ್, ಲೋಕೇಶ್, ಸತೀಶ್ ಇದ್ದರು.