ಧಾರವಾಡ: ಬಳ್ಳಾರಿ ಜಿಲ್ಲೆಯಲ್ಲಿ ನಡೆದ ಅಪಘಾತ ಪ್ರಕರಣ ಕುರಿತು ಪೊಲೀಸ್ ತನಿಖೆ ನಡೆಯುತ್ತಿದೆ. ಸಚಿವ ಆರ್. ಅಶೋಕ ಅವರು ತಮ್ಮ ಮಗನ ಪಾತ್ರವಿಲ್ಲ ಎಂದಿದ್ದಾರೆ. ತನಿಖೆ ನಂತರ ಯಾರ ಪಾತ್ರ ಇದೆ ಎಂದು ತಿಳಿಯಲಿದ್ದು, ಅವರ ಮೇಲೆ ಕಾನೂನು ಕ್ರಮವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣವನ್ನು ಮುಚ್ಚಿಡುವ ಪ್ರಶ್ನೆಯೇ ಇಲ್ಲ. ನಮ್ಮ ಸರ್ಕಾರ ಯಾರ ತಪ್ಪನ್ನೂ ಮುಚ್ಚಿ ಹಾಕುವ ಕೆಲಸ ಮಾಡುವುದಿಲ್ಲ. ತನಿಖೆ ನಡೆದ ಬಳಿಕ ತಪ್ಪಿತಸ್ಥರ ಬಗ್ಗೆ ತಿಳಿಯಲಿದೆ. ಕಾನೂನು ಪ್ರಕಾರ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದರು. ಇನ್ವೆಸ್ಟ್ ಕರ್ನಾಟಕ ಬೆಂಗಳೂರು ಬಿಟ್ಟು ಪ್ರಥಮ ಬಾರಿಗೆ ಹುಬ್ಬಳ್ಳಿಯಲ್ಲಿ ನಡೆದಿದೆ. ಬಂಡವಾಳ ಹೂಡಿಕೆ ಮಾಡಿದವರಿಗೆ ಭೂಮಿ ನೀಡಲು ರಾಜ್ಯದಲ್ಲಿ ಭೂಮಿಗೆ ಕೊರತೆ ಇಲ್ಲ. ಹೀಗಾಗಿ ಉದ್ಯಮ ಪ್ರಾರಂಭಿಸಲು ಯಾವುದೇ ತೊಂದರೆ ಇಲ್ಲ. ಅವುಗಳನ್ನು ಫಾಲೋಅಪ್ ಮಾಡಿ ಘಟಕಗಳು ಶೀಘ್ರದಲ್ಲೇ ಪ್ರಾರಂಭಗೊಳ್ಳಲು ಪ್ರಯತ್ನಿಸಲಾಗುವುದು ಎಂದರು.
ಹುಬ್ಬಳ್ಳಿಯಲ್ಲಿ ಮೂವರು ವಿದ್ಯಾರ್ಥಿಗಳು ಆಜಾದ್ ಕಾಶ್ಮೀರ ಘೊಷಣೆ ಕುರಿತು ಪ್ರತಿಕ್ರಿಯೆ ನೀಡಿದ ಶೆಟ್ಟರ್, ದೇಶದ್ರೋಹ ಘೊಷಣೆ ಕೂಗಿದವರ ವಿರುದ್ಧ ಪೊಲೀಸರು ಸೂಕ್ತ ಕ್ರಮಕೈಗೊಳ್ಳುತ್ತಾರೆ ಎಂದರು.
ಜಿಲ್ಲಾ ಉಸ್ತುವಾರಿ ಬದಲಾವಣೆ ಕುರಿತು ಯಾವುದೇ ಮಾಹಿತಿ ಇಲ್ಲ ಎಂದರು.