ಜಿಲ್ಲೆ

ಪ್ರಕರಣ, ಚೇತರಿಕೆಯಲ್ಲಿ ದಾಖಲೆ

ಧಾರವಾಡ: ಜಿಲ್ಲೆಯಲ್ಲಿ ಕರೊನಾ ಪ್ರಕರಣಗಳ ಚೇತರಿಕೆ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದ್ದು, ಗುರುವಾರ ಒಂದೇ ದಿನ 341 ಜನರು ಆರಾಮಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇದೊಂದು ದಾಖಲೆಯಾಗಿದೆ. ಚೇತರಿಕೆ ಪ್ರಮಾಣ ಶೇ. 55ನ್ನು ಮೀರಿರುವುದು ಇನ್ನೊಂದು ಸಂತಸದ ಸಂಗತಿಯಾಗಿದೆ.

212 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇದು ಸಹ ಒಂದು ದಿನದ ಅತಿ ಹೆಚ್ಚಿನ ಸಂಖ್ಯೆಯಾಗಿದೆ. ಒಟ್ಟು ಕರೊನಾ ಪ್ರಕರಣ ಸಂಖ್ಯೆ 5243ಕ್ಕೆ ಏರಿಕೆಯಾಗಿದೆ. ಇದುವರಿಗೆ 2846 ಜನ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 2225 ಪ್ರಕರಣಗಳು ಸಕ್ರಿಯವಾಗಿವೆ. ವೈರಸ್ ಗೆದ್ದವರ ಸಂಖ್ಯೆಯೇ ದೊಡ್ಡದಾಗಿರುವುದು ಗಮನಾರ್ಹವಾಗಿದೆ. ಮತ್ತೆ 8 ಜನರು ಮೃತಪಟ್ಟಿರುವುದಾಗಿ ಗುರುವಾರ ತಿಳಿಸಲಾಗಿದೆ. ಒಟ್ಟು ಸಾವಿಗೀಡಾದವರ ಸಂಖ್ಯೆ 172ಕ್ಕೆ ಏರಿದೆ. ಸದ್ಯ 40 ಜನರು ತೀವ್ರ ನಿಗಾ ಘಟಕದಲ್ಲಿ ಉಪಚಾರದಲ್ಲಿದ್ದಾರೆ.

ಹುಬ್ಬಳ್ಳಿ-ಧಾರವಾಡದಲ್ಲೇ ಹೆಚ್ಚು ಪ್ರಕರಣಗಳು ಕಂಡುಬರುತ್ತಿವೆ. ಹುಬ್ಬಳ್ಳಿ ನಗರ ಮತ್ತು ಗ್ರಾಮೀಣ ತಾಲೂಕಿನ 54 ಕಡೆಗಳಲ್ಲಿ; ಧಾರವಾಡ ನಗರ ಮತ್ತು ಹಳ್ಳಿಗಳಲ್ಲಿಯ 44 ಪ್ರದೇಶಗಳಲ್ಲಿ ಕರೊನಾ ಪ್ರಕರಣಗಳು ಪತ್ತೆಯಾಗಿವೆ.

ಅಳ್ನಾವರದ ಆಜಾದ ರಸ್ತೆ, ಸ್ಟೇಶನ್ ಸಮೀಪ; ಕಲಘಟಗಿಯ ಮೈಲಾರಲಿಂಗ ನಗರ, ಜೋಶಿ ಓಣಿ; ನವಲಗುಂದ ತಾಲೂಕಿನ ದ್ಯಾಮವ್ವನ ಗುಡಿ ಬಳಿ, ಬೆಳವಟಗಿ, ಶಲವಡಿ; ಕುಂದಗೋಳ ತಾಲೂಕಿನ ಮತ್ತಿಗಟ್ಟಿ; ಅಣ್ಣಿಗೇರಿಯ ಬನಶಂಕರಿ ನಗರ, ಬಸ್ ನಿಲ್ದಾಣ, ಆಸ್ಪತ್ರೆ, ಕಾಳಿದಾಸ ನಗರದಲ್ಲಿ ಸೋಂಕಿತರು ಕಂಡುಬಂದಿದ್ದಾರೆ. ಬೇರೆ ಜಿಲ್ಲೆಯ ಕೆಲವು ಪ್ರಕರಣಗಳೂ ಧಾರವಾಡ ಜಿಲ್ಲೆಯಲ್ಲಿ ದಾಖಲಾಗಿವೆ.

ವೈದ್ಯನ ಪ್ರಾಣಕ್ಕೆ ಎರವಾದ ಕರೊನಾ
ಹುಬ್ಬಳ್ಳಿಯ ಅರವಿಂದ ನಗರ ನಿವಾಸಿ ಮನೋವೈದ್ಯ ಡಾ. ಮಖ್ಸೂದ್ ಜಾಗೀರದಾರ (55) ಅವರು ಗುರುವಾರ ಖಾಸಗಿ ಆಸ್ಪತ್ರೆ ಯಲ್ಲಿ ಮೃತಪಟ್ಟಿದ್ದಾರೆ. ಅವರಿಗೆ ಕರೊನಾ ಸೋಂಕು ತಗುಲಿತ್ತು. ವೈರಸ್ ದೃಢಪಟ್ಟಾಗಿನಿಂದ ಹೋಂ ಐಸೋಲೇಷನ್ ಆಗಿದ್ದ ಡಾ. ಮಖ್ಸೂದ್, ಆ. 5ರಂದು ಪ್ರಾರ್ಥನೆ ಸಲ್ಲಿಸುವ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದರು. ತಕ್ಷಣ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಕರೊನಾ ಸೋಂಕು ಹರಡದಂತೆ ಏನೇನು ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಅವರು ಸ್ವಯಂ ಸ್ಪೂರ್ತಿಯಿಂದ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.

ಗಂಟಲ ದ್ರವ ಸಂಗ್ರಹ ವ್ಯವಸ್ಥೆ
ಧಾರವಾಡ:
ಕೋವಿಡ್ ತಪಾಸಣೆಗಾಗಿ ಗಂಟಲ ದ್ರವ ಸಂಗ್ರಹಿಸಲು ಜಿಲ್ಲಾಡಳಿತ ಮೊಬೈಲ್ ವಾಹನಗಳನ್ನು ರೂಪಿಸಿದ್ದು, ಆ. 7ರಂದು ಹುಬ್ಬಳ್ಳಿಯ 4 ಹಾಗೂ ಧಾರವಾಡದ 2 ಸ್ಥಳಗಳಲ್ಲಿ ಸ್ಥಳಗಳಲ್ಲಿ ಲಭ್ಯ ಇರುತ್ತವೆ. ಜನರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ. ಆ. 7ರಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 4.30ರವರೆಗೆ ಹುಬ್ಬಳ್ಳಿಯ ಕಿತ್ತೂರು ಚನ್ನಮ್ಮ ಮೈದಾನ, ನೆಹರು ಕ್ರೀಡಾಂಗಣ, ಮಹಾನಗರ ಪಾಲಿಕೆ ವಲಯ ಕಚೇರಿ 10ರ ಬಳಿ, ಶ್ರೀ ಸಿದ್ಧಾರೂಢ ಮಠದ ಹತ್ತಿರ ಹಾಗೂ ಧಾರವಾಡದ ಕಲಾಭವನದ ಹತ್ತಿರ, ಚನ್ನಬಸವೇಶ್ವರ ನಗರದ ಲಿಂಗಾಯತ ಭವನದ ಹತ್ತಿರ ಸ್ವಾ್ಯಬ್ ಕಲೆಕ್ಷನ್ ಮಾಡುವ ಮೊಬೈಲ್ ವಾಹನಗಳು ನಿಲ್ಲುತ್ತವೆ. ಗ್ರಾಮೀಣ ಭಾಗದ ಉಪ್ಪಿನಬೆಟಗೇರಿ ಹಾಗೂ ನರೇಂದ್ರ ಗ್ರಾಮಗಳಿಗೆ ಮತ್ತು ಹುಬ್ಬಳ್ಳಿಯ ಗೋಕುಲ ರಸ್ತೆ ಹಾಗೂ ಟೆಂಡರ್ ಶ್ಯೂರ್ (ವಿದ್ಯಾನಗರ) ರಸ್ತೆಗಳಿಗೆ ಸ್ವಾ್ಯಬ್ ಕಲೆಕ್ಷನ್ ಮಾಡುವ ಮೊಬೈಲ್ ವಾಹನಗಳು ತೆರಳಿ, ಬೆಳಗ್ಗೆ 11ರಿಂದ ಸಂಜೆ 4.30ರವರೆಗೆ ಪ್ರಮುಖ ಸ್ಥಳಗಳಲ್ಲಿ ನಿಲ್ಲುತ್ತವೆ. ಅಲ್ಲಿನ ನಿವಾಸಿಗಳೂ ಸ್ವಯಂ ಪ್ರೇರಣೆಯಿಂದ ಪರೀಕ್ಷೆಗೆ ಒಳಗಾಗಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.