ದಾವಣಗೆರೆ: ತ್ರಿಭಾಷಾ ಕವಿ ಪಂ.ಪುಟ್ಟರಾಜ ಗುರುಗಳ ಸಮಗ್ರ ಸಾಹಿತ್ಯ ಪ್ರಕಟಿಸುವಂತೆ ಡಾ.ಪಂ.ಪುಟ್ಟರಾಜ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಚನ್ನವೀರಸ್ವಾಮಿ ಹಿರೇಮಠ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಗದಗಿನ ಡಾ.ಪಂ.ಪುಟ್ಟರಾಜ ಸೇವಾ ಸಮಿತಿಯಿಂದ ನಗರದ ಬಾಡ ಕ್ರಾಸ್‌ನ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪುಟ್ಟರಾಜ ಗುರು ವಚನಪ್ರಭಾ ಸಾವಿರದ ಸಾಹಿತ್ಯ ಸಾವಿರ ಮನೆ,ಮನಗಳಿಗೆ ಅಭಿಯಾನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪುಟ್ಟರಾಜ ಗುರುಗಳ ಸಮಗ್ರ ಸಾಹಿತ್ಯ ಪ್ರಕಟಿಸುವಷ್ಟು ಆರ್ಥಿಕ ಸಾಮರ್ಥ್ಯ ನಮ್ಮಲಿಲ್ಲ. ಹೀಗಾಗಿ, ಸರ್ಕಾರವೇ ಜವಾಬ್ದಾರಿ ತೆಗೆದುಕೊಳ್ಳಬೇಕು. ವಚನ ಸಾಹಿತ್ಯ, ದಾಸ ಸಾಹಿತ್ಯ, ಕವಿಗಳು ಹಾಗೂ ಮಹಾನ್ ವ್ಯಕ್ತಿಗಳ ಸಾಹಿತ್ಯ ಹೊರ ತಂದಂತೆ ಪುಟ್ಟರಾಜ ಗುರುಗಳ ಸಾಹಿತ್ಯ ಪ್ರಕಟಣೆಗೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ಪಂ. ಪುಟ್ಟರಾಜ ಗುರುಗಳ ಸಾಹಿತ್ಯವನ್ನು ಮನೆ, ಮನಗಳಿಗೆ ತಲುಪಿಸುವ ಅಭಿಯಾನ ಕೈಗೊಂಡಿದ್ದು, ಕಳೆದ ತಿಂಗಳು ಗದಗಿನಲ್ಲಿ ಕಾಶಿ ಜಗದ್ಗುರುಗಳು ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.ದಾವಣಗೆರೆ, ಕಲ್ಬುರ್ಗಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಡೆಸಲಾಗುವುದು.ಪುಟ್ಟರಾಜ ಗುರುಗಳ ಸಾಹಿತ್ಯ ಕೃತಿಗಳನ್ನು ಕೊಂಡುಕೊಳ್ಳುವ ಅಭಿಮಾನಿ ಭಕ್ತರು ಮದುವೆ ವಾರ್ಷಿಕೋತ್ಸವ, ಜನ್ಮದಿನ ಮೊದಲಾದ ಶುಭ ಸಮಾರಂಭಗಳಲ್ಲಿ ಪುಸ್ತಕ ದಾಸೋಹ ಸೇವೆ ಮಾಡಲಿದ್ದಾರೆ. ಪುಟ್ಟರಾಜ ಗುರುಗಳ ಸಾಹಿತ್ಯ ಸದಾ ಜೀವಂತ. ಪ್ರತಿಯೊಬ್ಬರೂ ಇದನ್ನು ಉಳಿಸಿಕೊಂಡು ಹೋಗುವ ಕೆಲಸ ಮಾಡಬೇಕು ಎಂದು ಹೇಳಿದರು.
ಡಾ.ಪಂ.ಪುಟ್ಟರಾಜ ಸೇವಾ ಸಮಿತಿ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಬಸಯ್ಯ ಚರಂತಿಮಠ ಮಾತನಾಡಿ, ಪುಟ್ಟರಾಜ ಗುರುಗಳು ಸಂಗೀತ, ಸಾಹಿತ್ಯ, ಕೀರ್ತನ, ಪುರಾಣ ಮೊದಲಾದ ಕಲೆಗಳನ್ನು ಕಲಿಸುವ ಮೂಲಕ ಸಮಾಜಕ್ಕೆ ಉನ್ನತ ಕೊಡುಗೆ ನೀಡಿದ್ದಾರೆ. ಕನ್ನಡ, ಹಿಂದಿ, ಸಂಸ್ಕೃತದಲ್ಲಿ ಗ್ರಂಥ ರಚಿಸಿದ ಅಪರೂಪದ ತ್ರಿಭಾಷಾ ಪಂಡಿತರಲ್ಲೊಬ್ಬರು ಎಂದು ಸ್ಮರಿಸಿದರು.
ಸಮಿತಿಯ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಸುಧಾ ಮಂಜುನಾಥ್, ಜಿಲ್ಲಾಧ್ಯಕ್ಷ ಪಿ.ಬಿ. ವಿನಾಯಕ, ಜಿಲ್ಲಾ ಉಪಾಧ್ಯಕ್ಷ ಎಂ.ಕೆ. ರೇವಣಸಿದ್ದಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ಸತೀಶ್, ಎ. ಕೊಟ್ರಪ್ಪ ಕಿತ್ತೂರು ಇದ್ದರು.
ನಂತರ ಕಲೆಗೆ ಕಣ್ಣಿತ್ತ ಪೂಜ್ಯರು ಕುರಿತು ಕವಿಗೋಷ್ಠಿ ನಡೆಯಿತು. ವಾಣಿ ಬಸವರಾಜ್ ಕಾರ್ಯಕ್ರಮ ನಡೆಸಿಕೊಟ್ಟರು. ಪಿ. ಜಯರಾಮನ್, ಬಿ.ಎಂ.ಜಿ. ವೀರೇಶ್, ಡಾ. ಕರಿಯಪ್ಪ, ಮಾರುತಿ ಶಾಲೆಮನೆ ಬಿ.ಎಂ.ಪ್ರವೀಣ, ವಾಮದೇವಪ್ಪ ಈಚಘಟ್ಟ ಸೇರಿ ಹಲವು ಕವಿಗಳು ಕವನ ವಾಚಿಸಿದರು.
---