ಜಿಲ್ಲೆ

ಪೌಷ್ಟಿಕ ಆಹಾರ ಸ್ಥಗಿತಕ್ಕೆ ವಿರೋಧ

ಮೂಡಿಗೆರೆ: ಅಪೌಷ್ಟಿಕತೆಯಿಂದ ಬಳಲುತ್ತಿರುವ ಬುಡಕಟ್ಟು ಗಿರಿಜನರಿಗೆ ಮಳೆಗಾಲದಲ್ಲಿ 6 ತಿಂಗಳು ಪೌಷ್ಟಿಕ ಆಹಾರ ನೀಡಲಾಗುತ್ತಿತ್ತು. ಆದರೆ ಜೂನ್​ನಿಂದ ಸ್ಥಗಿತಗೊಳಿಸಲಾಗಿದೆ. ಇದನ್ನೇ ನಂಬಿರುವ ಬುಡಕಟ್ಟು ಗಿರಿಜನ ಕುಟುಂಬಗಳಿಗೆ ತೊಂದರೆಯಾಗಿದೆ. ಸರ್ಕಾರ ಈ ಯೋಜನೆಯನ್ನು ಮುಂದುವರಿಸಬೇಕು ಎಂದು ಗಿರಿಜ್ಯೋತಿ ಗಿರಿಜನರ ಸಂಘದ ಪದಾಧಿಕಾರಿಗಳು ತಾಲೂಕು ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.

ಸಂಘದ ತಾಲೂಕು ಅಧ್ಯಕ್ಷ ವಿಜೇಂದ್ರ ಮಾತನಾಡಿ, ಗುಡ್ಡಗಾಡು ಹಾಗೂ ಅರಣ್ಯ ಪ್ರದೇಶದ ಗಿರಿಜನರು ಮಳೆಗಾಲದಲ್ಲಿ ಆಹಾರ ಸಿಗದೆ ಕಂಗಾಲಾಗುತ್ತಾರೆಂಬ ಉದ್ದೇಶದಿಂದ ಈ ಹಿಂದಿನ ಸರ್ಕಾರ ಪ್ರತಿವರ್ಷ ಜೂನ್​ನಿಂದ ಡಿಸೆಂಬರ್​ವರೆಗೆ ಪ್ರತಿ ತಿಂಗಳು ಬುಡಕಟ್ಟು ವರ್ಗವಾದ ಗೌಡ್ಲು, ಹಸಲರು ಪಂಗಡದ ಪ್ರತಿ ಕುಟುಂಬಕ್ಕೆ 15 ಕೆಜಿ ಅಕ್ಕಿ, 2 ಲೀಟರ್ ಅಡುಗೆ ಎಣ್ಣೆ, ಅರ್ಧ ಕೆಜಿ ತುಪ್ಪ, 1 ಕೆಜಿ ಬೆಲ್ಲ, 2 ಕೆಜಿ ಹೆಸರುಕಾಳು ಹಾಗೂ ಹೆಸರುಬೇಳೆ, 30 ಮೊಟ್ಟೆಗಳನ್ನು ಸಮಾಜಕಲ್ಯಾಣ ಇಲಾಖೆ ಮೂಲಕ ನೀಡಲಾಗುತ್ತಿತ್ತು. ಇದರಿಂದ ಗಿರಿಜನರ ಪೌಷ್ಟಿಕ ಆಹಾರಕ್ಕೆ ತೊಂದರೆ ಆಗಿರಲಿಲ್ಲ. ಈಗಿನ ಸರ್ಕಾರ ಯೋಜನೆ ಸ್ಥಗಿತಗೊಳಿಸಿ ಗಿರಿಜನರ ಆಹಾರವನ್ನು ಕಸಿದುಕೊಂಡಿದೆ ಎಂದು ದೂರಿದರು.