ಜಿಲ್ಲೆ

ಪೌಷ್ಟಿಕ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ

ಸರಗೂರು: ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಬಡಗಲಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಅಲೀಮ್ ಪಾಷಾ ಸಲಹೆ ನೀಡಿದರು.


ತಾಲೂಕಿನ ಹಾದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಗಲಪುರ ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ ಗುರುವಾರ ಮುತ್ತಿಗೆಹುಂಡಿ ಹಾಡಿಯಲ್ಲಿ ಆಯೋಜಿಸಿದ್ದ ಸೀಮಂತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಹಾಡಿಯಲ್ಲಿರುವ ಗರ್ಭಿಣಿಯರ ಆರೋಗ್ಯ ರಕ್ಷಣೆಗಾಗಿ ಸರ್ಕಾರಿ ಆರೋಗ್ಯ ಕೇಂದ್ರದಿಂದ ಹಲವು ಸೌಲಭ್ಯ ಕಲ್ಪಿಸಿದ್ದು, ಆಶಾ ಕಾರ್ಯಕರ್ತೆಯರಿಗೆ ಮಾಹಿತಿ ನೀಡಿ, ತಾಯಿ ಕಾರ್ಡ್ ಪಡೆದುಕೊಳ್ಳಬೇಕು. ಆರೋಗ್ಯ ಕೇಂದ್ರದಲ್ಲಿ ನಿಗದಿತ ತಪಾಸಣೆ ಮಾಡಿಕೊಳ್ಳುವ ಮೂಲಕ ಆರೋಗ್ಯದತ್ತ ನಿಗಾ ವಹಿಸಬೇಕು. ತಾಯಿ ಕಾರ್ಡ್‌ನಲ್ಲಿ ಗರ್ಭಿಣಿಯರ ಪ್ರಾರಂಭಿಕ ಹಂತದಿಂದ ಹಿಡಿದು ಹೆರಿಗೆ ಆಗಿ ಮಗುವಿಗೆ ಚುಚ್ಚುಮದ್ದು ಹಾಕಿಸಿಕೊಳ್ಳುವರೆಗೆ ಮಾಹಿತಿ ಇದೆ. ಅದನ್ನು ಪ್ರತಿಯೊಬ್ಬ ಗರ್ಭಿಣಿಯರು ಓದಿ ತಿಳಿದುಕೊಳ್ಳಬೇಕು ಎಂದು ಮಾಹಿತಿ ನೀಡಿದರು.
ತಾಯಿ, ಶಿಶು ಮರಣ ತಡೆಗಟ್ಟಲು ಜಿಲ್ಲಾ ಆರೋಗ್ಯ ಆಡಳಿತವು ಸದಾ ಶ್ರಮಿಸುತ್ತಿದ್ದೂ ನಮ್ಮ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ತಾಯಿ ಹಾಗೂ ಶಿಶು ಮರಣ ಆಗಿಲ್ಲ ಎಂದು ತಿಳಿಸಿದ ಡಾ.ಅಲೀಮ್ ಪಾಷಾ ಅವರು, ಗರ್ಭಿಣಿಯರಲ್ಲಿ ಕಂಡುಬರುವ ರಕ್ತಹೀನತೆ ತಡೆಗೆ ಆಸ್ಪತ್ರೆಯಲ್ಲಿ ಉಚಿತವಾಗಿ ಆಯುಷ್ಮಾನ್ ಯೋಜನೆಯಡಿ ಅಗತ್ಯ ಔಷಧ ನೀಡಲಾಗುವುದು ಎಂದು ತಿಳಿಸಿದರು.


ಗ್ರಾ.ಪಂ. ಸದಸ್ಯರಾದ ಪ್ರಕಾಶ್, ಗಂಗಮ್ಮ, ಪಿಡಿಒ ಶಿಲ್ಪಾ, ಆಸ್ಪತ್ರೆ ಸಿಬ್ಬಂದಿ ಶರಣಪ್ಪ, ಸುರೇಶ, ರಮೇಶ್ ಜಂಗಮರಹಟ್ಟಿ, ಅಂಗನವಾಡಿ ಕಾರ್ಯಕರ್ತೆ ಜಯಲಕ್ಷ್ಮೀ, ಆಶಾ ಕಾರ್ಯಕರ್ತೆರಾದ ಶ್ರೀದೇವಿ, ಹೇಮಾವತಿ, ಸರಸ್ವತಿ, ಮುಖಂಡರಾದ ವೆಂಕಟಸ್ವಾಮಿ ಜಯರಾಮ್, ಮಹೇಶ್, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಿಬ್ಬಂದಿ ಇದ್ದರು.