ಹೊಸಕೋಟೆ: ಅಪೌಷ್ಟಿಕತೆಯಿಂದಾಗಿ ದೇಶದಲ್ಲಿ ಪ್ರತಿ ವರ್ಷ ನೂರಾರು ಮಕ್ಕಳು ಅಸುನೀಗುತ್ತಿದ್ದಾರೆ. ಆದ್ದರಿಂದ, ದೇಶೀಯವಾಗಿ ಬೆಳೆಯುವ ಹಾಗೂ ನಮ್ಮ ಸಂಸ್ಕೃತಿಗೆ ಒಗ್ಗುವ ಆಹಾರವನ್ನು ನೀಡುವ ಮೂಲಕ ಅಪೌಷ್ಟಿಕತೆ ಸಮಸ್ಯೆಯಿಂದ ಹಾಗೂ ಅಕಾಲ ಮೃತ್ಯುವಿನಿಂದ ಕಾಪಾಡಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಬಸವರಾಜ ಜಿ. ಸನದಿ ಸಲಹೆ ನೀಡಿದರು.
ನಗರದ ಸ್ತ್ರೀಶಕ್ತಿ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಹಾಗೂ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ದೇಶದ ಜನ ಪಾಶ್ಚಿಮಾತ್ಯ ಸಂಸ್ಕೃತಿಯ ಮೋಹಕ್ಕೆ ಒಳಗಾಗಿ ನಮ್ಮದಲ್ಲದ ಆಹಾರವನ್ನು ಮಕ್ಕಳಿಗೆ ಕೊಡುತ್ತಿದ್ದಾರೆ. ಅದರಲ್ಲಿ ಪೌಷ್ಟಿಕಾಂಶಗಳು ಇಲ್ಲದ ಕಾರಣ ಮಕ್ಕಳು ತೊಂದರೆಗೆ ಒಳಗಾಗುತ್ತಿದ್ದಾರೆ ಎಂದರು.
ದೇಶದಲ್ಲಿ ಎಲ್ಲರಿಗೂ ಕಾನೂನಿನ ಅರಿವಿರಬೇಕು. ಆದ್ದರಿಂದ, ಯಾರಾದರೂ ತಪ್ಪು ಮಾಡಿದರೆ, ಅವರಿಗೆ ಕಾನೂನು ಗೊತ್ತಿರಲಿ ಇಲ್ಲದಿರಲಿ ಶಿಕ್ಷೆ ವಿಧಿಸುತ್ತವೆ ಎಂದು ಎಚ್ಚರಿಕೆ ನೀಡಿದರು.
ಹೆಚ್ಚುವರಿ ಸಿವಿಲ್ ನ್ಯಾಯಾದೀಶ ಆರ್.ಬಿ. ಗಿರೀಶ್ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರ ಸೇವೆ ನಿಜವಾಗಿಯೂ ದೇವರಿಗೆ ಮಾಡಿದ ಸೇವೆಯಂತೆ. ಜನತೆ ನಿಮ್ಮನ್ನು ಯಾವಾಗಲೂ ನೆನಪಿಸಿಕೊಳ್ಳುತ್ತಾರೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಕೆ.ವಿ. ಸುಬ್ರಮಣಿ ಮಾತನಾಡಿ, ನಮ್ಮ ನಿತ್ಯದ ಆಹಾರ ಪದ್ಧತಿಯಲ್ಲಿ ಬೇಳೆಕಾಳು, ಮೊಳಕೆಕಾಳು ಮತ್ತು ಸೊಪ್ಪನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಬೇಕು ಎಂದು ಹೇಳಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿದ್ಯಾ, ಸಹಾಯಕ ಸರ್ಕಾರಿ ಅಭಿಯೋಜನಕಿ ಎ.ಎಂ. ಚಂದ್ರಕಲಾ, ವಕೀಲರ ಸಂಘದ ಉಪಾಧ್ಯಕ್ಷ ಹನುಮಂತರಾಜು, ಖಜಾಂಚಿ ಶ್ರೀನಿವಾಸ್ ಮತ್ತಿತರರಿದ್ದರು.