ಜಿಲ್ಲೆ

ಪೌರಾಣಿಕ ನಾಟಕಗಳು ನಶಿಸಬಾರದು

ಅರಕಲಗೂಡು: ತಾಲೂಕಿನ ಬಿಳಗೂಲಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಶ್ರೀಬಸವೇಶ್ವರ ಕೃಪಾ ಪೋಷಿತ ನಾಟಕ ಮಂಡಳಿ ವತಿಯಿಂದ ಶನಿ ಪ್ರಭಾವ ಅಥವಾ ರಾಜಾ ವಿಕ್ರಮ ಪೌರಾಣಿಕ ನಾಟಕ ಹಮ್ಮಿಕೊಳ್ಳಲಾಗಿತ್ತು. ಮಾಜಿ ಸಚಿವ ಎ.ಮಂಜು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಪೌರಾಣಿಕ ನಾಟಕ ಕಲೆಯ ಮಹತ್ವ ಕುರಿತು ವಿವರಿಸಿದರು.


ಕಾಂಗ್ರೆಸ್ ಮುಖಂಡ ಎಚ್.ಪಿ.ಶ್ರೀಧರ್‌ಗೌಡ ಮಾತನಾಡಿ, ಒಂದು ಕಾಲಕ್ಕೆ ಸಮಾಜಕ್ಕೆ ದಾರಿ ದೀಪವಾಗಿದ್ದ ಪೌರಾಣಿಕ ನಾಟಕಗಳು ಗ್ರಾಮೀಣ ಭಾಗದ ಜನರ ಜೀವನದ ಮೇಲೆ ಪ್ರಭಾವ ಬೀರಿ ಬದುಕಿನ ಭಾಗವಾಗಿತ್ತು. ನಾನು ನನ್ನದೆಂದು ಅಹಂಕಾರ ಪಡುವ ಮನುಷ್ಯನಿಗೆ ಯಾವ ಅಧಿಕಾರವೂ ಶಾಶ್ವತವಲ್ಲ ಎಂಬುದು ಮನಗಾಣಬೇಕು. ಪೌರಾಣಿಕ ನಾಟಕಗಳ ತಿರುಳನ್ನು ನಾವೆಲ್ಲ ಅರ್ಥ ಮಾಡಿಕೊಳ್ಳಬೇಕು. ಇಂತಹ ಕಲೆಗಳು ನಶಿಸಲು ಅವಕಾಶ ನೀಡಬಾರದು ಎಂದು ಸಲಹೆ ನೀಡಿದರು.

ಮಂಜಣ್ಣ ನನಗೆ ಮಾರ್ಗದರ್ಶಕರು : ರಾಮನಾಥಪುರ ಹೋಬಳಿಯ ಬಿಳಗೂಲಿ ಗ್ರಾಮದಲ್ಲಿ ನಡೆದ ಶ್ರೀ ಶನಿ ಪ್ರಭಾವ ಅಥವಾ ರಾಜಾ ವಿಕ್ರಮ ಪೌರಾಣಿಕ ನಾಟಕದ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಸಚಿವ ಎ.ಮಂಜು ಮತ್ತು ತಾಲೂಕಿನಲ್ಲಿ ರಾಜಕೀಯ ರಂಗಕ್ಕೆ ಕಾಲಿಟ್ಟು ಹೊಸ ಅಲೆ ಸೃಷ್ಟಿಸಿರುವ ಪ್ರಭಾವಿ ಯುವ ನೇತಾರ ಪೊಲೀಸ್ ಮಾಜಿ ಅಧಿಕಾರಿ ಎಚ್.ಪಿ.ಶ್ರೀಧರ್‌ಗೌಡ ಅವರು ಒಂದೇ ವೇದಿಕೆಯಲ್ಲಿ ಆಸೀನರಾಗಿ ಉಭಯ ಕುಶಲೋಪರಿಯಲ್ಲಿ ತೊಡಗಿದ್ದು ವಿಶೇಷವಾಗಿತ್ತು. ಸಮಾರಂಭದ ಆರಂಭದ ಭಾಷಣದಲ್ಲಿ ಮಾತನಾಡಿದ ಶ್ರೀಧರ್‌ಗೌಡ ಅವರು, ಮಂಜಣ್ಣ ಅವರು ನನಗೆ ಮುಂದಿನ ಮಾರ್ಗದರ್ಶಕರು ಎಂದರು.


ಭಕ್ತಿಯ ಮೂಲಕ ದೇವರನ್ನು ಒಲಿಸಿಕೊಂಡ ಭಕ್ತ ಕನಕದಾಸರು ಕೃತಿ, ಕೀರ್ತನೆಗಳನ್ನು ರಚಿಸಿ ಸಮಾಜಕ್ಕೆ ಹೊಸ ಬೆಳಕು ನೀಡಿ ವಿಶ್ವಕ್ಕೆ ಮಾನವತ್ವದ ಸಂದೇಶ ಸಾರಿದರು. ಸಂತರ ವಿಚಾರಧಾರೆಗಳು ನಮ್ಮೆಲ್ಲರಿಗೂ ಸ್ಫೂರ್ತಿದಾಯಕವಾಗಿದ್ದು, ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಸಾಗಬೇಕಿದೆ ಎಂದು ಪ್ರತಿಪಾದಿಸಿದರು.


ಯುವ ಶಕ್ತಿಯ ಕೊಡುಗೆ ಸಮಾಜಕ್ಕೆ ಅಗತ್ಯವಾಗಿದೆ. ಹೀಗಾಗಿ ಉನ್ನತ ಅವಕಾಶಗಳನ್ನು ಕಳೆದುಕೊಳ್ಳದೆ ಎಲ್ಲರಿಗೂ ಮೇಲ್ಪಂಕ್ತಿಯಾಗಬೇಕು. ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಅವರು ಅನೇಕ ಭಾಗ್ಯಗಳನ್ನು ಜಾರಿಗೊಳಿಸಿ ಬಡವರ ಏಳಿಗೆಗೆ ಶ್ರಮಿಸಿದರು ಎಂದಾಗ ನೆರೆದಿದ್ದ ಜನತೆ ಹರ್ಷೋದ್ಗಾರ ವ್ಯಕ್ತಪಡಿಸಿದರು.


ಗ್ರಾಪಂ ಅಧ್ಯಕ್ಷೆ ಮಂಜುಳಾ, ಸದಸ್ಯರಾದ ಮಾದೇಶ್, ರಾಜೇಗೌಡ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುತ್ತಿಗೆ ರಮೇಶ್, ಕೆ.ಎಸ್.ಆರ್.ಟಿ.ಸಿ. ನೌಕರ ಮೊಗಣ್ಣ, ಮುಖಂಡರಾದ ಹೇಮಂತ ಕುಮಾರ್, ಚಂದೇಗೌಡ, ಶಿವಪ್ಪ, ಕಾಳೇಗೌಡ, ಕರೀಗೌಡ ಹಾಗೂ ಗ್ರಾಮಸ್ಥರು ಇದ್ದರು.