ಕೆ.ಆರ್.ಪೇಟೆ: ಆಧುನಿಕ ಯುಗದಲ್ಲಿ ಕಲೆ ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಹೆಚ್ಚು ಪೌರಾಣಿಕ ನಾಟಕಗಳನ್ನು ಏರ್ಪಡಿಸುವ ಮೂಲಕ ಕಲೆಯನ್ನು ಪೋಷಿಸುವ ಕೆಲಸ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ವಿಜಯ ರಾಮೇಗೌಡ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿಯ ಕಾಡುಮೆಣಸ ಗ್ರಾಮದಲ್ಲಿ ಇತ್ತೀಚೆಗೆ ಚನ್ನಿಗರಾಯಸ್ವಾಮಿ ಕೃಪಾಪೋಷಿತ ನಾಟಕ ಮಂಡಲಿ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ್ಣವಿಜಯ ಅಥವಾ ಧೇನುಕಾಸುರನ ವಧೆ ಪೌರಾಣಿಕ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ನಾಟಕದಲ್ಲಿ ಬರುವ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಹಬಾಳ್ವೆಯಿಂದ ಬದುಕು ಸಾಗಿಸಬೇಕು. ಪೂರ್ವಜರ ಕಾಲದಿಂದಲೂ ಬೆಳೆದುಕೊಂಡು ಬಂದಿರುವ ನಾಟಕ ಕಲೆಯನ್ನು ಮುಂದಿನ ತಲೆಮಾರಿಗೂ ಉಳಿಸಿ, ಬೆಳೆಸುವ ಕೆಲಸ ಮಾಡಬೇಕು. ಉತ್ತಮ ಮೌಲ್ಯ ಹಾಗೂ ಸಂದೇಶಗಳನ್ನು ಸಾರುವ ಪೌರಾಣಿಕ ನಾಟಕಗಳು ಪೂರ್ವಜರ ಕೊಡುಗೆಗಳಾಗಿವೆ ಎಂದು ಹೇಳಿದರು.
ಒಂದು ಕಾಲದಲ್ಲಿ ಪೌರಾಣಿಕ ನಾಟಕಗಳು ಗ್ರಾಮಿಣ ಜನರಿಗೆ ಮನರಂಜನೆಯ ಬಹುಮುಖ್ಯ ಮಾಧ್ಯಮಗಳಾಗಿದ್ದವು. ನಾಟಕಗಳ ಮೂಲಕ ನಮ್ಮ ಹಿರಿಯರು ಜೀವನ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸಿಕೊಡುತ್ತಾ ಅವರಿಗೆ ಬದುಕಿನ ಸನ್ಮಾರ್ಗವನ್ನು ತೋರಿಸುತ್ತಿದ್ದರು. ಪುರಾಣದ ಪಾತ್ರಗಳ ಮೂಲಕ ಬದುಕಿನ ಆದರ್ಶಗಳನ್ನು ಮಕ್ಕಳ ಮನಸ್ಸಿಗೆ ತುಂಬಿಸುತ್ತಾ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಬೇರುಗಳನ್ನು ಗಟ್ಟಿಗೊಳಿಸುತ್ತಿದ್ದರು. ಇಂದು ಮೊಬೈಲ್ ಸಂಸ್ಕೃತಿ ಎಲ್ಲವನ್ನೂ ಮರೆಮಾಚುತ್ತಿದೆ ಎಂದರು.
ಮನ್‌ಮುಲ್ ನಿರ್ದೇಶಕ ಎಚ್.ಟಿ.ಮಂಜು, ಪುರಸಭೆ ಸದಸ್ಯ ಬಸ್ ಸಂತೋಷ್, ಆರ್‌ಟಿಒ ಅಧಿಕಾರಿ ಮಲ್ಲಿಕಾರ್ಜುನ್, ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಮು, ತಾಪಂ ಮಾಜಿ ಸದಸ್ಯ ಮಾಧವಪ್ರಸಾದ್, ಹಿರೀಕಳಲೆ ಗ್ರಾಪಂ ಉಪಾಧ್ಯಕ್ಷ ಮಂಜೇಗೌಡ, ಮಾರ್ಗೋನಹಳ್ಳಿ ತಮ್ಮೇಗೌಡ, ಅಣ್ಣೇಚಾಕನಹಳ್ಳಿ ಕಾಂತರಾಜು, ಅಶೋಕ್, ಗದ್ದೆಹೊಸೂರು ದರ್ಶನ್, ಬಂಡೀಹೊಳೆ ದರ್ಶನ್ ಇದ್ದರು.