ಭದ್ರಾವತಿ: ಪೌರಸೇವಾ ನೌಕರರ ಬೇಡಿಕೆಗಳು ನ್ಯಾಯಸಮ್ಮತವಾಗಿವೆ. ಒಂದು ವೇಳೆ ರಾಜ್ಯ ಸರ್ಕಾರ ಈಡೇರಿಸದಿದ್ದರೆ ಎಲ್ಲ ನಗರಸಭಾ ಸದಸ್ಯರು ಕಾರ್ಯಕಲಾಪಗಳನ್ನು ಬಹಿಷ್ಕರಿಸಿ ಸರ್ಕಾರಕ್ಕೆ ಬಿಸಿಮುಟ್ಟಿಸುವ ಕೆಲಸ ಮಾಡುತ್ತೇವೆ ಎಂದು ಸದಸ್ಯ ಬಿ.ಕೆ.ಮೋಹನ್ ತಿಳಿಸಿದರು. ನಗರಸಭಾ ಸಭಾಂಗಣದಲ್ಲಿ ಶುಕ್ರವಾರ ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, 3.50 ಲಕ್ಷ ಜನಸಂಖ್ಯೆ ಹೊಂದಿರುವ ಭದ್ರಾವತಿ ನಗರದಲ್ಲಿ ಪೌರ ಕಾರ್ಮಿಕರ ಶ್ರಮದಿಂದ ನೀರು, ಸ್ವಚ್ಛತೆ ಸೇರಿ ಮೂಲ ಸೌಕರ್ಯ ಒದಗಿಸಲಾಗುತ್ತಿದೆ. ಅವರಿಲ್ಲದಿದ್ದರೆ ನಾಗರಿಕರು ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ ಎಂದರು. ನಮ್ಮ ಮನವಿಗೆ ಸ್ಪಂದಿಸಿ ಪೌರಸೇವಾ ನೌಕರರು ಪ್ರತಿಭಟನೆ ಹಿಂಪಡೆದಿದ್ದಾರೆ. ಅವರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ ಸಭೆಯ ಒಮ್ಮತದ ನಿರ್ಣಯವನ್ನು ತಿಳಿಸುವುದು ನಮ್ಮ ಕರ್ತವ್ಯ. ಕಾನೂನಿನಲ್ಲಿ ಅವರ ಅಗತ್ಯತೆ ಈಡೇರಿಸಲು ಎಷ್ಟರಮಟ್ಟಿಗೆ ಅವಕಾಶವಿದೆ ಎಂಬುದನ್ನು ಪೌರಾಯುಕ್ತರು ಮಾಹಿತಿ ನೀಡಬೇಕು ಎಂದು ತಿಳಿಸಿದರು. ಶಾಸಕ ಬಿ.ಕೆ.ಸಂಗಮೇಶ್ವರ್ ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪೌರಕಾರ್ಮಿಕರ ಬೇಡಿಕೆಗಳ ಮನವಿಯನ್ನು ಸಲ್ಲಿಸಿದ್ದಾರೆ. ಸರ್ಕಾರವನ್ನು ಒತ್ತಾಯಿಸುವ ಮೂಲಕ ಪೌರಸೇವಾ ನೌಕರರ ಬೆಂಬಲವಾಗಿ ನಿಂತಿದ್ದಾರೆ. ನಾಮನಿರ್ದೇಶಿತ ಸದಸ್ಯರು ಸೇರಿ ನಗರಸಭೆ ಸದಸ್ಯರೆಲ್ಲರೂ ನಿಮ್ಮ ಹೋರಾಟಕ್ಕೆ ಬೆಂಬಲವಾಗಿರುತ್ತೇವೆ. ಪ್ರತಿ ಜಿಲ್ಲೆ ಹಾಗೂ ತಾಲೂಕುಗಳ ಸ್ಥಳೀಯ ಆಡಳಿತಗಳೂ ಸಹ ಇಂತಹ ನಿರ್ಣಯಗಳನ್ನು ತೆಗೆದುಕೊಂಡು ಸರ್ಕಾರವನ್ನು ಒತ್ತಾಯಿಸಬೇಕು ಎಂದರು. ಬಿ.ಟಿ.ನಾಗರಾಜ್ ಮಾತನಾಡಿ, ರಾಜ್ಯದಲ್ಲಿ ಯಾವುದೇ ಸರ್ಕಾರವಿದ್ದರೂ ಜನಸಾಮಾನ್ಯರ ಸೇವೆಯಲ್ಲಿ ತೊಡಗಿರುವ ಪೌರಸೇವಾ ನೌಕರರ ಬೇಡಿಕೆಗಳನ್ನು ಈಡೇರಿಸುವುದು ಕರ್ತವ್ಯ. ಪೌರಸೇವಾ ನೌಕರರ ಸೇವೆ ಕಾಯಂಗೊಳಿಸಿ ರಾಜ್ಯ ಸರ್ಕಾರಿ ನೌಕರರಿಗೆ ಕೊಡುವ ಎಲ್ಲ ಸವಲತ್ತುಗಳನ್ನು ನೀಡಬೇಕು. ಆರೋಗ್ಯ ಯೋಜನೆ ಜ್ಯೋತಿ ಸಂಜೀವಿನಿ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು. ಸಭೆಯಲ್ಲಿ ಚನ್ನಪ್ಪ ಹಾಗೂ ಟಿಪ್ಪು, ಲತಾ ಚಂದ್ರಶೇಖರ್ ಸೇರಿ ಇನ್ನಿತರ ಸದಸ್ಯರೂ ಸಹ ಪೌರಸೇವಾ ನೌಕರರ ಹೋರಾಟವನ್ನು ಬೆಂಬಲಿಸುವುದಾಗಿ ತಿಳಿಸಿದರು. ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಮಾತನಾಡಿ, 1986ರಲ್ಲಿ ಮಂಜುನಾಥ್ ಅಧ್ಯಕ್ಷತೆಯಲ್ಲಿ ಸಂಘ ಅಸ್ತಿತ್ವಕ್ಕೆ ಬಂದ ದಿನದಿಂದಲೂ ವಿವಿಧ ಬೇಡಿಕೆಗಳಿಗಾಗಿ ಹೋರಾಟಗಳು ನಡೆಯುತ್ತಲೇ ಇವೆ. ಪೌರಸೇವಾ ನೌಕರರ ಬೇಡಿಕೆಗಳನ್ನು ನಗರಸಭೆಯಿಂದ ಈಡೇರಿಸಲು ಸಾಧ್ಯವಿಲ್ಲ. ಇದು ಸರ್ಕಾರದ ಮಟ್ಟದಲ್ಲಿ ಆಗಬೇಕು ಎಂದು ತಿಳಿಸಿದರು. ಜಿಲ್ಲೆಯ ವಿವಿಧ ತಾಲೂಕುಗಳ ಪೌರಸೇವಾ ನೌಕರರ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಸಯ್ಯದ್ ರಿಯಾಜ್ ಇತರರಿದ್ದರು.
ಪೌರಸೇವಾ ನೌಕರರ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರವನ್ನು ಒತ್ತಾಯಿಸಲು ವಿಶೇಷ ಸಾಮಾನ್ಯ ಸಭೆ ಕರೆದಿರುವುದು ಇದೇ ಮೊದಲು. ಪೌರಸೇವಾ ನೌಕರರ ಸಂಘಕ್ಕೆ ತನ್ನದೇ ಆದ ಇತಿಹಾಸವಿದೆ. ಇದು ರಾಜ್ಯದಲ್ಲಿರುವ ಎಲ್ಲಾ ಪೌರ ಸೇವಾ ನೌಕರರ ಸಮಸ್ಯೆಯಾಗಿದ್ದು ಸರ್ಕಾರವೇ ಬಗೆಹರಿಸಬೇಕು. ಪ್ರಕಾಶ್ ಎಂ. ಚನ್ನಪ್ಪನವರ್ ಪೌರಾಯುಕ್ತ, ಭದ್ರಾವತಿ ಸರ್ಕಾರದ ಭರವಸೆಯ ಮೇರೆಗೆ ನಮ್ಮ ಹೋರಾಟ ಸ್ಥಗಿತಗೊಳಿಸಿ ಕರ್ತವ್ಯಕ್ಕೆ ಹಾಜರಾಗಿದ್ದೇವೆ. ನಗರಸಭೆ ಆಡಳಿತವೊಂದು ಪೌರಸೇವಾ ನೌಕರರ ಏಳಿಗೆಗಾಗಿ ವಿಶೇಷ ಕೌನ್ಸಿಲ್ ಸಭೆ ಕರೆದು ತೀರ್ಮಾನಿಸಿ ನಿರ್ಣಯ ಮಂಡಿಸಲು ಮಾಡುತ್ತಿರುವ ಪ್ರಯತ್ನ ರಾಜ್ಯದಲ್ಲಿಯೇ ಮೊದಲು. ಹೇಮಂತಕುಮಾರ್ ಪೌರಸೇವಾ ನೌಕರರ ಸಂಘದ ಜಿಲ್ಲಾಧ್ಯಕ್ಷ