ಜಿಲ್ಲೆ

ಪೌರತ್ವ ಕಾಯ್ದೆಯಿಂದ ಕೆಡುಕಿಲ್ಲ : ಮಾಜಿ ಸಚಿವ ಎಂಟಿಬಿ ನಾಗರಾಜ್ ಸ್ಪಷ್ಟನೆ

ಹೊಸಕೋಟೆ: ಕೇಂದ್ರ ಸರ್ಕಾರ ರಾಷ್ಟ್ರದ ಒಳಿತಿಗಾಗಿಯೇ ನಾಗರಿಕ ಪೌರತ್ವ ಕಾಯ್ದೆ ತಿದುಪಡಿಗೆ ಮುಂದಾಗಿದೆ ಹೊರತು ಯಾವುದೇ ಜಾತಿ ಅಥವಾ ಸಮುದಾಯಕ್ಕೂ ಕಾಯ್ದೆಯಿಂದ ಕೆಡುಕಿಲ್ಲ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು.

ನಗರದಲ್ಲಿ ಹೊಸಕೋಟೆ ನಾಗರಿಕ ಹಿತರಕ್ಷಣಾ ವೇದಿಕೆ ಹಾಗೂ ವಿವಿಧ ಜನಪರ ಸಂಘಟನೆಯಿಂದ ನಾಗರಿಕ ಪೌರತ್ವ ಕಾಯ್ದೆ ಬೆಂಬಲಿಸಿ ಶನಿವಾರ ಹಮ್ಮಿಕೊಂಡಿದ್ದ ಬೃಹತ್ ಮೆರವಣೆಗೆಯಲ್ಲಿ ಮಾತನಾಡಿದರು.

ಕಾಯ್ದೆ ವಿಷಯಕ್ಕೆ ಕೆಲವರು ರಾಜಕೀಯ ಬಣ್ಣ ಬಳಿದು ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ. ಪ್ರಚೋದನಾಕಾರಿ ಭಾಷಣಗಳ ಮೂಲಕ ಸಮಾಜದ ಸ್ವಾಸ್ಥ್ಯ ಹದಗೆಡಿಸುವ ಹುನ್ನಾರ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಂಗಳೂರಿನಲ್ಲಿ ಕಲ್ಲುತೂರಾಟ ನಡೆಸಿ, ಪೊಲೀಸರನ್ನು ಗಾಯಗೊಳಿಸಿದರು, ಇಬ್ಬರು ಮೃತಪಟ್ಟ ಘಟನೆಯೂ ನಡೆಯಿತು. ಕಾಯ್ದೆ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆ ಮೂಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಭಾರತ ಜಾತ್ಯತೀತ ರಾಷ್ಟ್ರವಾಗಿದೆ, ಯಾವುದೇ ಜಾತಿ ಅಥವಾ ಕೋಮಿನ ಜನರಿಗೆ ತೊಂದರೆ ಮಾಡುವ ಉದ್ದೇಶವಿಲ್ಲ. ದೇಶದ ಸುಭದ್ರತೆ ದೃಷ್ಟಿಯಿಂದ ನರೇಂದ್ರ ಮೋದಿ ಸರ್ಕಾರ ಕೈಗೊಂಡಿರುವ ಈ ಕಾಯ್ದೆಯನ್ನು ಎಲ್ಲರೂ ಬೆಂಬಲಿಸಬೇಕು ಎಂದು ಕರೆ ನೀಡಿದರು.

ಅರಿವು ಮೂಡಿಸೋಣ: ದೇಶದ ಹಿಂದು ಹಾಗೂ ಮುಸ್ಲಿಂ ಜನಾಂಗದ ನಡುವೆ ಕಂದಕ ಮೂಡಿಸುವ ಕೆಲಸವನ್ನು ಕೆಲ ರಾಜಕೀಯ ಪಕ್ಷಗಳು ಮಾಡುತ್ತಿವೆ. ಕೇಂದ್ರ ಸರ್ಕಾರ ಜಾರಿ ಮಾಡಿರುವ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ತಪ್ಪಾಗಿ ತಿಳಿದಿರುವವರಿಗೆ ಅರಿವು ಮೂಡಿಸುವ ಕೆಲಸವನ್ನು ನಾವೆಲ್ಲಾ ಸೇರಿ ಮಾಡಬೇಕು ಎಂದು ಬಿಜೆಪಿ ನಾಯಲಿ ಮಾಳವಿಕಾ ಅವಿನಾಶ್ ಹೇಳಿದರು.

ಪೌರತ್ವ ಕಾಯ್ದೆ ಜಾರಿಯಿಂದ ಮುಸ್ಲಿಮ್ ಸಮುದಾಯದವರಿಗೆ ಒಳಿತಾಗಲಿದೆ. ಧರ್ಮಾದಾರಿತವಾಗಿ ದಾಳಿಗೊಳಗಾದವರಿಗೆ ನೊಂದವರಿಗೆ ಸಹಾಯವಾಗಲಿದೆ ಎಂದರು. ಕೆಲ ರಾಜಕೀಯ ಪಕ್ಷಗಳು ಜನರ ಖಂಡಿಸುವುದರ ಜತೆಗೆ ದೇಶ ಸುಭದ್ರವಾಗಿರಲು ಎಲ್ಲರೂ ಬೆಂಬಲಿಸಬೇಕು ಎಂದು ಕರೆ ನೀಡಿದರು.

ಪ್ರಜ್ಞಾವಂತರು ಯಾಕೆ ವಿರೋಧಿಸುತ್ತೀರಾ?: ದೇಶದ ಅಲ್ಪಸಂಖ್ಯಾತರಿಗಾಗಿಯೇ ಈ ಕಾಯ್ದೆ ಜಾರಿಮಾಡಿಲ್ಲ. ಇದರ ಬಗ್ಗೆ ದೇಶದ ಯಾವುದೇ ಅಲ್ಪಸಂಖ್ಯಾತರಿಗೆ ಅನುಮಾನವಿದ್ದರೆ ಅದನ್ನು ಸ್ಪಷ್ಟವಾಗಿ ಪರಿಹರಿಸಿಕೊಳ್ಳಿ, ಅದು ಬಿಟ್ಟು ರಾಜಕೀಯ ಪ್ರೇರಿತರಾಗಿ ಕಾನೂನು ಮೀರುವುದು, ದೇಶದ ಆಸ್ತಿ ಹಾನಿಗೆ ಕಾರಣರಾಗುವುದು ಸರಿಯಲ್ಲ ಎಂದು ಹಿರಿಯ ವಕೀಲ ಪಿ.ಎಸ್.ಮಂಜುನಾಥ್ ಹೇಳಿದರು.

ಪ್ರಮುಖ ರಸ್ತೆಯಲ್ಲಿ ಮೆರವಣಿಗೆ: ಹೊಸಕೋಟೆ ನಗರದ ಎಂವಿ ಬಡಾವಣೆಯಿಂದ ಕಾಲೇಜು ರಸ್ತೆ, ಕೆಇಬಿ ವೃತ್ತ, ಜೆ.ಸಿ ವೃತ್ತದ ಮೂಲಕ ನಗರದ ಬಸವೇಶ್ವರ ವೃತ್ತದವರೆಗೂ ಬೃಹತ್ ಮೆರವಣೆಗೆ ಹಮ್ಮಿಕೊಳ್ಳಲಾಗಿತ್ತು. ಪ್ರಮುಖ ರಸ್ತೆಗಳಲ್ಲಿ ಕೇಂದ್ರ ಸರ್ಕಾರದ ಪರವಾಗಿ ೋಷಣೆ ಕೂಗಲಾಯಿತು.

ಇಟಲಿ ಮೂಲದ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಗೆ ದೇಶದಲ್ಲಿ ಪೌರತ್ವ ನೀಡಲಾಗಿದೆ. ಹಾಗೇಯೆ ದೇಶದಲ್ಲಿ ನೆಲೆಸಿರುವ ಎರಡ್ಮೂರು ತಲೆಮಾರಿನವರಿಗೂ ಪೌರತ್ವವಿದೆ. ಕೆಲ ತಿಂಗಳು ಅಥವಾ ವರ್ಷವಷ್ಟೆ ನೆಲೆಸಿ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿರುವವರಿಗೆ ಇದು ತೊಡಕಾಗಿದೆಯಷ್ಟೆ. ಎಂಟಿಬಿ ನಾಗರಾಜ್, ಮಾಜಿ ಸಚಿವ