ಕುಶಾಲನಗರ ಪುರಸಭೆ ವತಿಯಿಂದ ಸೋಮವಾರ ಪುರಸಭೆ ಆವರಣದಲ್ಲಿ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಕೃಷ್ಣಪ್ರಸಾದ್, ಜಯವರ್ಧನ್, ಆನಂದಕುಮಾರ್, ಜಯಲಕ್ಷ್ಮೀ, ಶೈಲಾ, ಉದಯ್ ಇತರರು ಪಾಲ್ಗೊಂಡಿದ್ದರು.  
ಜಿಲ್ಲೆ

ಪೌರಕಾರ್ಮಿಕರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲಿ

ಕುಶಾಲನಗರ : ಪೌರಕಾರ್ಮಿಕರು ತಮ್ಮ ಸ್ವಂತ ಆರೋಗ್ಯವನ್ನು ಲೆಕ್ಕಿಸದೆ ಸಮಾಜವನ್ನು ಸ್ವಚ್ಛಗೊಳಿಸುವ ಅವರ ಕಾಯಕ ಅತ್ಯಂತ ಶ್ರೇಷ್ಠವಾದದ್ದು ಎಂದು ಕುಶಾಲನಗರ ಪುರಸಭೆ ಸದಸ್ಯ ಬಿ.ಜಯವರ್ಧನ್ ಹೇಳಿದರು.
ಕುಶಾಲನಗರ ಪುರಸಭೆ ವತಿಯಿಂದ ಸೋಮವಾರ ಪುರಸಭೆ ಆವರಣದಲ್ಲಿ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಹೋಗುವಂತೆ ಮಾಡಬೇಕಾದ ದೊಡ್ಡ ಜವಾಬ್ದಾರಿ ಎಲ್ಲರ ಮೇಲಿದೆ. ಅದನ್ನು ನಿಷ್ಠೆಯಿಂದ ಮಾಡಬೇಕಾದ ಅನಿವಾರ್ಯತೆ ಕೂಡ ಇದೆ. ಹಲವು ಪೌರಕಾರ್ಮಿಕರಿಗೆ ಇನ್ನೂ ನಿವೇಶನ ದೊರೆತ್ತಿಲ್ಲ. ಅಂತಹ ನಿವೇಶನ ರಹಿತರಿಗೆ ಸರ್ಕಾರದ ಮೂಲಕ ನಿವೇಶನ ಕೊಡಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದು ತಿಳಿಸಿದರು.
ಸದಸ್ಯ ಡಿ.ಕೆ.ತಿಮ್ಮಪ್ಪ ಮಾತನಾಡಿ, ನಗರ, ಪಟ್ಟಣ, ಗ್ರಾಮಗಳಲ್ಲಿ ಸ್ವಚ್ಛವಾಗಿದೆ ಎಂದರೆ ಅದರ ಹಿಂದೆ ಪೌರಕಾರ್ಮಿಕರ ಶ್ರಮ ಬಹಳಷ್ಟು ಇದೆ. ಅವರ ಸೇವೆ ಸದಾ ಸ್ಮರಣೀಯ. ಗೃಹಭಾಗ್ಯ ಯೋಜನೆಯಡಿ ಎಲ್ಲರಿಗೂ ಸೂರು ಕಲ್ಪಿಸುವ ಸಂಬಂಧ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ ಎಂದು ತಿಳಿಸಿದರು.

ಸದಸ್ಯರಾದ ವಿ.ಎಸ್.ಆನಂದಕುಮಾರ್, ಎಂ.ಬಿ.ಸುರೇಶ್, ಜಯಲಕ್ಷ್ಮೀ, ಶೈಲಾ, ಸುರಾಯಬಾನು, ಶಿವಶಂಕರ್, ಜಗದೀಶ್, ಪ್ರಕಾಶ್, ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಆರೋಗ್ಯ ನಿರೀಕ್ಷಕ ಉದಯ್, ಪೌರಕಾರ್ಮಿಕರಾದ ಸುರೇಶ್, ಕೃಷ್ಣ, ಕುಮಾರ್ ಇತರರು ಉಪಸ್ಥಿತರಿದ್ದರು.