ಜಿಲ್ಲೆ

ಪೌರಕಾರ್ಮಿಕರಿಲ್ಲದ ಪಟ್ಟಣ ನರಕ

ಸಕಲೇಶಪುರ: ಪೌರಕಾರ್ಮಿಕರಿಲ್ಲದ ಪಟ್ಟಣ ಭೂಮಿಯ ಮೇಲಿನ ನರಕ ಎಂದು ತಹಸೀಲ್ದಾರ್ ಜಯಕುಮಾರ್ ಅಭಿಪ್ರಾಯಪಟ್ಟರು.


ಪಟ್ಟಣದ ಪುರಭವನದಲ್ಲಿ ಪುರಸಭೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಪೌರಕಾರ್ಮಿಕರು ಪಟ್ಟಣದ ಜೀವನಾಡಿಯಾಗಿದ್ದಾರೆ. ಸದಾ ಅಪಾಯಕಾರಿ ಕೆಲಸದಲ್ಲೇ ತೊಡಗುವ ಪೌರಕಾರ್ಮಿಕರಿಗೆ ಅಗತ್ಯ ಸುರಕ್ಷಾ ಪರಿಕರಗಳನ್ನು ಒದಗಿಸುವುದು ಮೊದಲ ಆದ್ಯತೆಯಾಗಬೇಕು. ಬಹುತೇಕ ಪೌರಕಾರ್ಮಿಕರು ಸುರಕ್ಷಾ ಪರಿಕರಗಳನ್ನು ಧರಿಸದ ಕಾರಣ ಬಹುಬೇಗ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದರು.


ಪುರಸಭೆ ಅಧ್ಯಕ್ಷ ಕಾಡಪ್ಪ ಮಾತನಾಡಿ, ಪೌರಕಾರ್ಮಿಕರ ಅನುಕೂಲಕ್ಕಾಗಿ ಪಟ್ಟಣದ ಪ್ರೇಮ್‌ನಗರ ಬಡಾವಣೆಯ ಸರ್ವೇ ನಂ.128ರಲ್ಲಿರುವ ಒಂದೂವರೆ ಎಕರೆ ಜಾಗವನ್ನು ವಸತಿ ಉದ್ದೇಶಕ್ಕಾಗಿ ಅನುಮೋದಿಸಿದ್ದು ಶೀಘ್ರದಲ್ಲೇ ನಿವೇಶನ ಹಂಚಲಾಗುವುದು ಎಂದು ಹೇಳಿದರು.


ಪುರಸಭೆ ಸದಸ್ಯೆ ವರಲಕ್ಷ್ಮೀ ಮಾತನಾಡಿ, ಪೌರಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಎಂದರು.


ಪಟ್ಟಣದ ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಮುಖ್ಯ ರಸ್ತೆಯಲ್ಲಿ ಪೌರಕಾರ್ಮಿಕರು, ಪುರಸಭೆ ಸದಸ್ಯರು, ಸಿಬ್ಬಂದಿಯನ್ನು ಪುರಭವನದವರೆಗೆ ಮೆರವಣಿಗೆ ಮಾಡಲಾಯಿತು. ಪುರಸಭೆಯಲ್ಲಿ ಸೇವೆ ಸಲ್ಲಿಸಿದ ಹಿರಿಯ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.
ಪುರಸಭೆ ಉಪಾಧ್ಯಕ್ಷೆ ವಿದ್ಯಾ ಪಿ.ಶೆಟ್ಟಿ, ಮುಖ್ಯಾಧಿಕಾರಿ ಮಂಜುನಾಥ್ ಇತರರಿದ್ದರು.