ಗೋಣಿಕೊಪ್ಪಲು: ಸಮಾಜದಲ್ಲಿ ಪೌರಕಾರ್ಮಿಕರ ಜೀವನೋಪಾಯಕ್ಕೆ ಅಗತ್ಯ ಸೌಕರ್ಯಗಳು ಸರಿಯಾಗಿ ದೊರೆಯುತ್ತಿಲ್ಲ ಎಂದು ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಬೇಸರ ವ್ಯಕ್ತಪಡಿಸಿದರು.
ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133ನೇ ಜನ್ಮದಿನಾಚರಣೆ ಅಂಗವಾಗಿ ಪ್ರೊ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಪೊನ್ನಂಪೇಟೆಯ ಕರ್ನಾಟಕ ಪಬ್ಲಿಕ್ ಶಾಲೆ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ಪೌರಕಾರ್ಮಿಕರಿಗೆ ಸನ್ಮಾನ ಮತ್ತು ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕೆಲವು ಭಾಗಗಳಲ್ಲಿ ತಲೆಮಾರುಗಳಿಂದ ಪೌರಕಾರ್ಮಿಕರು ಸಂಕಷ್ಟದಲ್ಲೇ ಜೀವನ ಸಾಗಿಸುತ್ತಿದ್ದಾರೆ. ಜೀವನೋಪಾಯಕ್ಕೆ ಬೇಕಾದ ಯಾವುದೇ ಸೌಕರ್ಯಗಳು ದೊರೆಯುತ್ತಿಲ್ಲ. ಈ ನಿಟ್ಟಿನಲ್ಲಿ ಪೌರಕಾರ್ಮಿಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಹಾಗೂ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸುತ್ತಿರುವ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ ಮಾತನಾಡಿ, ಪುರಾತನ ಕಾಲದಿಂದಲೂ ಬಂಡವಾಳ ಶಾಹಿತ್ವ ಎಂಬುದು ಬೆಳೆದುಕೊಂಡು ಬಂದಿದೆ. ಆದರೆ, ಇಂದಿನ ಯುವ ಜನಾಂಗ ಶಿಕ್ಷಣ ಪಡೆದುಕೊಂಡ ನಂತರ ಸಮಾನತೆ ಎಂಬುದು ಸ್ವಲ್ಪ ಮಟ್ಟಿಗೆ ಬೆಳೆದು ಬಂದಿದೆ. ಹಲವು ದಲಿತ ನಾಯಕರು ದೇಶಕ್ಕಾಗಿ ಶ್ರಮಿಸಿದ್ದಾರೆ. ದಲಿತ ಸಮುದಾಯದವರು ಶೈಕ್ಷಣಿಕ ಮೀಸಲಾತಿ ಬಳಸಿಕೊಂಡು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದು ಸಲಹೆ ನೀಡಿದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪೊಯಿಲಂಗಡ ಪಲ್ವಿನ್ ಮಾತನಾಡಿ, ವಿದ್ಯೆ ಎನ್ನುವುದು ಯಾರಿಂದಲೂ ಕಸಿದುಕೊಳ್ಳಲಾಗದ ಆಸ್ತಿ. ಆ ಆಸ್ತಿಯನ್ನು ತಮ್ಮದಾಗಿಸಿಕೊಳ್ಳಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು ಎಂದರು.
ದಲಿತ ಸಂಘರ್ಷ ಸಮಿತಿ ಪೊನ್ನಂಪೇಟೆ ತಾಲೂಕು ಸಂಚಾಲಕ ಎಚ್.ಆರ್.ಜಗದೀಶ್ ಮಾತನಾಡಿ, ಸಮುದಾಯದವರಿಗೆ ಮುಖ್ಯವಾಗಿ ನಿವೇಶನದ ಅಗತ್ಯತೆ ಇರುವುದರಿಂದ ಜೀವಕ್ಕೊಂದು ಸೂರು ಜೀವನಕ್ಕೊಂದು ಊರು ಎಂಬ ಅಭಿಯಾನವನ್ನು ಕಾರ್ಯರೂಪಕ್ಕೆ ತರುವ ಉದ್ದೇಶ ಹೊಂದಲಾಗಿದೆ ಎಂದರು.
ವಿರಾಜಪೇಟೆ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಪ್ರೀತಿ ಚಿಕ್ಕ ಮಾದಯ್ಯ ಮಾತನಾಡಿದರು. ಪೊನ್ನಂಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2023 24ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಾಣಿಜ್ಯ ಹಾಗೂ ಕಲಾವಿಭಾಗದಲ್ಲಿ ಹಾಗೂ ಕರ್ನಾಟಕ ಪಬ್ಲಿಕ್ ಶಾಲೆ ಪ್ರೌಢಶಾಲಾ ವಿಭಾಗದಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪೊನ್ನಂಪೇಟೆ ಪಟ್ಟಣ ಪಂಚಾಯತಿ ಹಾಗೂ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.
ಹಾಸನದ ಶೇಕ್ಷಪಿಯನ್ ಕಾಲೇಜು ದೈಹಿಕ ಶಿಕ್ಷಣ ಶಿಕ್ಷಕ ಎ.ಸತೀಶ್, ಡಿಎಸ್‌ಎಸ್‌ನ ಕೊಡಗು ಮತ್ತು ಮೈಸೂರು ವಿಭಾಗೀಯ ಸಂಚಾಲಕ ಎನ್.ವೀರಭದ್ರಯ್ಯ, ಜಿಲ್ಲಾ ಸಂಚಾಲಕ ಎಚ್.ಎಲ್.ದಿವಾಕರ್, ಶ್ರೀಮಂಗಲ ಕಾಂಗ್ರೆಸ್ ಬೂತ್ ಅಧ್ಯಕ್ಷ ಸಿ.ಎಸ್.ಅಭಿನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.