ಬೇಲೂರು: ಪೌರಕಾರ್ಮಿಕರಿಗೆ ಆರೋಗ್ಯ ಅರಿವು ಮೂಡಿಸುವ ಸಲುವಾಗಿ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗಿದೆ ಎಂದು ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ಹೇಳಿದರು.
ಪುರಸಭೆ ಪೌರಕಾರ್ಮಿಕರು, ನೀರು ಸರಬರಾಜು ಸಿಬ್ಬಂದಿಗೆ ಮಂಗಳವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ, ಪೌರಕಾರ್ಮಿಕರಿಗೆ ಸಮವಸ್ತ್ರ ಮತ್ತು ವಿವಿಧ ಪರಿಕರಗಳ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪೌರಕಾರ್ಮಿಕರು ತಮ್ಮ ಜೀವದ ಹಂಗು ತೊರೆದು ನಾಗರಿಕರ ಜೀವರಕ್ಷಣೆಗೆ ಮುಂದಾಗುತ್ತಾರೆ. ಅಶುಚಿತ್ವದಲ್ಲಿ ಕೆಲಸ ಮಾಡುವುದರಿಂದ ವಿವಿಧ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಾರೆ. ಆದ್ದರಿಂದ ಪೌರಕಾರ್ಮಿಕರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಮಿಕರು ಕೆಲಸ ಮಾಡುವ ಸಂದರ್ಭ ವಿಷ ಜಂತುಗಳ ಕಡಿತಕ್ಕೆ ಒಳಗಾದ ತಕ್ಷಣ ಚಿಕಿತ್ಸೆ ಪಡೆಯಲು ಆರೋಗ್ಯ ಇಲಾಖೆಯಿಂದ ಗುರುತಿನ ಕಾರ್ಡ್ ನೀಡಿದರೆ ಅನುಕೂಲವಾಗಲಿದೆ. ನಿವೇಶನವಿಲ್ಲದ ಕಾರ್ಮಿಕರಿಗೆ ಪಟ್ಟಣ ಸಮೀಪದಲ್ಲಿ 5 ಎಕರೆ ಜಮೀನು ಖರೀದಿಸಿದ್ದು ಅಲ್ಲಿ ಆದ್ಯತೆ ಮೇಲೆ ನಿವೇಶನ ಕೊಡಲು ಕ್ರಮ ಕೈಗೊಳ್ಳಲಾಗುವುದು. 17ನೇ ಹಣಕಾಸು ಯೋಜನೆಯಲ್ಲಿ ಎಲ್ಲ ಕಾರ್ಮಿಕರಿಗೂ ಜೀವವಿಮೆ ಮಾಡಿಸಲಾಗುವುದು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್ ಮಾತನಾಡಿ, ಸರ್ಕಾರದ ಆದೇಶದಂತೆ ಪ್ರತಿ ಮೂರು ತಿಂಗಳಿಗೊಮ್ಮೆ ಪೌರಕಾರ್ಮಿಕರ ಆರೋಗ್ಯ ತಪಾಸಣೆ ಮಾಡುವುದಕ್ಕೆ ಅವಕಾಶವಿದೆ. ಪ್ರತಿಯೊಬ್ಬರು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಮುಖ್ಯಾಧಿಕಾರಿ ಎಸ್.ಡಿ.ಮಂಜುನಾಥ್ ಮಾತನಾಡಿ, ಪ್ರತಿ ಮೂರು ತಿಂಗಳಿಗೆ ಕಡ್ಡಾಯವಾಗಿ ಪೌರಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿಸಲು ನಾವು ಬದ್ಧರಾಗಿದ್ದೇವೆ ಎಂದರು.
ಪುರಸಭೆ ಉಪಾಧ್ಯಕ್ಷೆ ಜಮೀಲಾ ತೌಫಿಕ್, ಸದಸ್ಯರಾದ ಬಿ.ಗಿರೀಶ್, ಎ.ಆರ್.ಅಶೋಕ, ಜಗದೀಶ್, ಪ್ರಭಾಕರ್, ಉಷಾ, ಭರತ್, ಸೌಮ್ಯಾ, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಸತೀಶ್ ಇತರರಿದ್ದರು.