ಹೊಸನಗರದಲ್ಲಿ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರಾದ ರಮೇಶ, ನಾಗರಾಜ, ನಾಗಪ್ಪ, ಚಂದ್ರಪ್ಪ, ಗೀತಾ ಮತ್ತಿತರರನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಸನ್ಮಾನಿಸಿದರು. ಚಂದ್ರಕಲಾ ನಾಗರಾಜ್, ಎಚ್.ಜೆ.ರಶ್ಮಿ, ಎಂ.ಎನ್.ಹರೀಶ್, ಅಶ್ವಿನಿ ಕುಮಾರ್, ಗುರುರಾಜ್ ಇತರರಿದ್ದರು. 
ಜಿಲ್ಲೆ

ಪೌರಕಾರ್ಮಿಕರ ಮಕ್ಕಳು ಉನ್ನತ ಹುದ್ದೆಗೇರಲಿ

ಹೊಸನಗರ: ಪೌರ ಕಾರ್ಮಿಕರ ಮಕ್ಕಳು ಸಹ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಹೊಸನಗರ ಪಟ್ಟಣ ಪಂಚಾಯಿತಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಪೌರಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಪಟ್ಟಣದ ಸ್ವಚ್ಛತೆಗೆ ಪೌರ ಕಾರ್ಮಿಕರ ಕೊಡುಗೆ ವಿಶೇಷವಾದುದು ಎಂದರು.

ಪೌರ ಕಾರ್ಮಿಕರ ದಿನಾಚರಣೆ ಮೂಲಕ ಅವರನ್ನು ಗೌರವಿಸುವುದರ ಜತೆಗೆ ಅವರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಕ್ಷೇತ್ರದ ಶಾಸಕನಾಗಿ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಚಳಿ, ಗಾಳಿ ಮಳೆ ಲೆಕ್ಕಿಸದೆ ಪ್ರತಿದಿನ ಕಾರ್ಯನಿರ್ವಹಿಸುವ ಪೌರಕಾರ್ಮಿಕರ ಸೇವೆ ಅತ್ಯಂತ ಶ್ರೇಷ್ಠವಾದುದು ಎಂದು ಹೇಳಿದರು.

ಅನೇಕ ವರ್ಷಗಳಿಂದ ಪೌರಕಾರ್ಮಿಕರು ಹೊರಗುತ್ತಿಗೆ ಆಧಾರದ ಮೇಲೆ ಜೀವನದ ಭದ್ರತೆ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರ ಅವರಿಗೆ ಈಗ ಧೈರ್ಯ ತುಂಬಿದೆ. ಇನ್ನು ಕೆಲವು ಪೌರಕಾರ್ಮಿಕರು, ವಾಹನ ಚಾಲಕರು, ನೀರುಗಂಟಿಗಳು ಇನ್ನಿತರರು ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುವವರನ್ನು ಕಾಯಂಗೊಳಿಸಲು ಮುಖ್ಯಮಂತ್ರಿಗೆ ಮನವಿ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಪೌರಕಾರ್ಮಿಕರಾದ ರಮೇಶ, ನಾಗರಾಜ, ನಾಗಪ್ಪ, ಚಂದ್ರಪ್ಪ, ಗೀತಾ ಸೇರಿ 21 ಜನರನ್ನು ಸನ್ಮಾನಿಸಲಾಯಿತು. ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಪಪಂ ಅಧ್ಯಕ್ಷ ನಾಗಪ್ಪ, ಉಪಾಧ್ಯಕ್ಷೆ ಚಂದ್ರಕಲಾ ನಾಗರಾಜ್, ತಹಸೀಲ್ದಾರ್ ಎಚ್.ಜೆ.ರಶ್ಮಿ, ಮುಖ್ಯ ಅಕಾರಿ ಎಂ.ಎನ್.ಹರೀಶ್, ಸದಸ್ಯರಾದ ಅಶ್ವಿನಿಕುಮಾರ್, ಗುರುರಾಜ್, ಸಿಂತಿಯಾ ಸೇರಾವ್, ಶಾಹಿನ ನಾಸಿರ್, ಮರಿಯಪ್ಪ, ಕೃಷ್ಣವೇಣಿ, ಗಾಯತ್ರಿ ನಾಗರಾಜ್, ಗುರುರಾಜ್, ನಿತ್ಯಾನಂದ ನೇತ್ರಾವತಿ, ಪೌರಕಾರ್ಮಿಕರ ಸಂಘದ ಅಧ್ಯಕ್ಷ ನಾಗಪ್ಪ, ಉಪಾಧ್ಯಕ್ಷ ನಾಗರಾಜ್, ಆಶ್ರಯ ಸಮಿತಿ ಸದಸ್ಯ ರಾಕಾ ಇದ್ದರು.