ಆರ್.ಕೃಷ್ಣ ಮೈಸೂರು
ನಗರ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿರುವ ಪೌರಕಾರ್ಮಿಕ ಮಕ್ಕಳು ಈಗ ಐತಿಹಾಸಿಕ ಹಿಮಾಯಲ ಪರ್ವತ ಏರುವ ಸಾಹಸಯಾತ್ರೆ ಕೈಗೊಳ್ಳಲು ಸಿದ್ಧರಾಗಿದ್ದಾರೆ.
ಸ್ಥಿತಿವಂತರು, ಉದ್ಯೋಗಿಗಳು, ಸಾಮಾನ್ಯರು ಮಾತ್ರ ಹಿಮಾಲಯ ಪರ್ವತಾರೋಹಣ ನಡೆಸಲಿದ್ದಾರೆ ಎನ್ನುವ ಮನಸ್ಥಿತಿಯಲ್ಲಿರುವಾಗ ಪೌರಕಾರ್ಮಿಕರು ಸೇರಿದಂತೆ ನಾನಾ ವರ್ಗದವರನ್ನು ಸಾಹಸಯಾತ್ರೆಗೆ ನಗರದ ಟೈಗರ್ ಅಡ್ವೆಂಚರ್ ಫೌಂಡೇಷನ್ ಸಿದ್ಧಗೊಳಿಸಿದೆ. ಈ ಮೂಲಕ ಎಲ್ಲ ವರ್ಗದವರಲ್ಲಿಯೂ ನಾಯಕತ್ವ ಗುಣ ಬೆಳೆಸಲು ಮುಂದಾಗಿದೆ.
ಭಾರತದ ಸಾಹಸ ಕ್ರೀಡೆಗಳ ಪ್ರವರ್ತನ ಸಂಸ್ಥೆಯಾದ ಟೈಗರ್ ಅಡ್ವೆಂಚರ್ ಫೌಂಡೇಷನ್ ಮುಂದಾಳತ್ವದಲ್ಲಿ ಏಪ್ರಿಲ್ 24 ರಿಂದ ಮೇ 7ರವರೆಗೆ ಪೌರ ಕಾರ್ಮಿಕರ (ಸಿವಿಕ್ ವರ್ಕರ್ಸ್) ಮಕ್ಕಳಿಗಾಗಿ ವಿಶೇಷವಾಗಿ ಐತಿಹಾಸಿಕ ಹಿಮಾಲಯ ಸಾಹಸಯಾತ್ರೆಯನ್ನು ಉಚಿತವಾಗಿ ನಡೆಸಲಿದೆ. ಉತ್ತರಖಂಡದ ಘರ್‌ವಾಲ್ ಪ್ರದೇಶದ ಕ್ಯಾರ್‌ಕೋಟಿ ಮತ್ತು ಲ್ಯಾಂಬ್ ತಲ್ ನಡುವೆ ಈ ರೋಚಕ ಸಾಹನಯಾನ ನಡೆಯಲು ಯೋಜನೆ ರೂಪಿಸಲಾಗಿದೆ.
ಹಲವು ಪ್ರಥಮಗಳನ್ನು ಮಾಡಿಕೊಂಡು ಬರುತ್ತಿರುವ ಟೈಗರ್ ಅಡ್ವೆಂಚರ್ ಫೌಂಡೇಷನ್, ಪೌರ ಕಾರ್ಮಿಕರ ಮಕ್ಕಳಿಗಾಗಿ ಈ ರೀತಿಯ ಸಾಹಸಯಾತ್ರೆಯನ್ನು ಇದೇ ಮೊದಲ ಬಾರಿಗೆ ಆಯೋಜಿಸಿದೆ.
ಈ ಹಿಂದೆ ಕಣ್ಣು ಕಾಣದ ಅಂಗವಿಕಲರನ್ನು ಹಿಮಾಲಯ ಪರ್ವತ ಏರುವ ಸಾಹಸ ಕಾರ್ಯದಲ್ಲಿ ತೊಡಗಿಸಿ ಅತ್ಯಂತ ಯಶಸ್ವಿಗೊಳಿಸಿದ ಕೀರ್ತಿ ಫೌಂಡೇಷನ್‌ಗೆ ಸಲ್ಲುತ್ತದೆ. ಅಲ್ಲದೆ ಶಿಕ್ಷಕರು, ನರ್ಸ್‌ಗಳು, ಉದ್ಯೋಗಿಗಳು ಸೇರಿದಂತೆ ನಾನಾ ವರ್ಗದವರನ್ನು ಇಂತಹ ಸಾಹಸ ಯಾತ್ರೆಗೆ ಕರೆದೋಯ್ದ ಯಶಸ್ಸು ಸಂಸ್ಥೆಗಿದೆ.
ನಮ್ಮ ನಗರಗಳ ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳುವಲ್ಲಿ ಪೌರಕಾರ್ಮಿಕರ ಪಾತ್ರ ತುಂಬ ಮಹತ್ವವಾದುದು ಮತ್ತು ಅತ್ಯಗತ್ಯವಾದುದು. ಸಾಹಸ, ಕ್ರಿಯಾಶೀಲತೆ ಮತ್ತು ನಾಯಕತ್ವ ತರಬೇತಿಯ ಮೂಲಕ ಪೌರಕಾರ್ಮಿಕರ ಮಕ್ಕಳನ್ನು ಸಬಲೀಕರಣಗೊಳಿಸುವ ಮುಖಾಂತರ ಅವರ ಅಮೂಲ್ಯವಾದ ಕೊಡುಗೆಗಳನ್ನು ಗೌರವಿಸುವ ಗುರಿಯನ್ನು ಈ ಸಾಹಸಯಾತ್ರೆ ಹೊಂದಿದೆ.
ಪೌರಕಾರ್ಮಿಕರ ಮಕ್ಕಳಲ್ಲಿನ ಸಾಹಸ ಮನೋಭಾವವನ್ನು ಗುರುತಿಸುವ ಮತ್ತು ಅವರ ಕ್ರಿಯಾಶೀಲತೆಯನ್ನು ಉನ್ನತಿಗೇರಿಸುವಲ್ಲಿ ಮಹತ್ವದ ಹೆಜ್ಜೆ ಇದಾಗಿದೆ. ಅಲ್ಲದೆ ಮಕ್ಕಳು ಸಾಹಸವನ್ನು ಅನುಭವಿಸಲು, ಅವರ ಮಿತಿಗಳನ್ನು ಮೀರಿ ಸವಾಲುಗಳನ್ನು ಸ್ವೀಕರಿಸಲು ಹಾಗೂ ಉಜ್ವಲ ಭವಿಷ್ಯವನ್ನು ನಿರ್ಮಿಸಲು ಅವರಿಗೆ ಅವಕಾಶವನ್ನು ಒದಗಿಸುತ್ತದೆ.
10ರಿಂದ 12 ಚಿಣ್ಣರ ಆಯ್ಕೆ
ಪೌರಕಾರ್ಮಿಕರ 13 ರಿಂದ 21 ವರ್ಷದೊಳಗಿನ 10ರಿಂದ 12 ಮಕ್ಕಳನ್ನು ಸ್ವತಃ ಪರ್ವತಾರೋಹಿಗಳಾಗಿರುವ ವೈದ್ಯರು ನಡೆಸುವ ಕಠಿಣ ವೈದ್ಯಕೀಯ ತಪಾಸಣೆ ಪ್ರಕ್ರಿಯೆಯ ಮೂಲಕ ಸಾಹಸಯಾತ್ರೆಗೆ ಆಯ್ಕೆ ಮಾಡಲಾಗುತ್ತದೆ.
ಆಯ್ಕೆಯಾದ ನಂತರ ಈ ಸಾಹಸ ಯಾತ್ರೆಯಲ್ಲಿ ಭಾಗವಹಿಸುವ ಮಕ್ಕಳು ಮೈಸೂರು ಜಾಗೂ ಸುತ್ತಮುತ್ತಲಿನ ಕುಕ್ಕರಹಳ್ಳಿ ಕೆರೆ, ವಿಜಯನಗರ ಕ್ರೀಡಾಂಗಣ, ಗಂಗೋತ್ರಿ ಕ್ಯಾಂಪಸ್, ಚಾಮುಂಡಿ ಬೆಟ್ಟ, ಕುಂತಿ ಬೆಟ್ಟ, ಬೆಟ್ಟದಪುರ ಬೆಟ್ಟ ಮತ್ತು ಹೊಸಹಳ್ಳಿ ಸೇರಿದಂತೆ ಇನ್ನಿತರ ಪ್ರದೇಶದಲ್ಲಿ ಪರ್ವತಾರೋಹಣ ಕುರಿತು ತರಬೇತಿ ನೀಡಲಾಗುತ್ತದೆ.
ಮೈಸೂರಿನಲ್ಲಿ ಜೋಶ್ ಓಟದಲ್ಲಿ ಭಾಗವಹಿಸುವ ನಂತರ ಈ ತರಬೇತಿ ಅಂತ್ಯಗೊಳ್ಳುತ್ತದೆ. ಈ ಮೂಲಕ ಭಾಗವಹಿಸುವವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಾಹಸಯಾತ್ರೆಗೆ ಸಿದ್ಧರಾಗಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ.
ಕಳೆದ 15 ವರ್ಷಗಳಿಂದ ಅನೇಕ ಹಿಮಾಲಯ ಸಾಹಸಯಾತ್ರೆಗಳು ಮತ್ತು ಚಾರಣಗಳನ್ನು ಮುನ್ನಡೆಸಿರುವ ಮರಿಮಲ್ಲಪ್ಪ ಪಿಯು ಕಾಲೇಜಿನ ಗಣಿತ ಉಪನ್ಯಾಸಕ ಎ.ಅನಿಲ್‌ಕುಮಾರ್ ಅವರ ನೇತೃತ್ವದಲ್ಲಿ ಈ ಸಾಹಸಯಾತ್ರೆ ನಡೆಯಲಿದೆ. ಭಾರತ, ಭೂತಾನ್, ನೇಪಾಳ ಮತ್ತು ತಾಂಜೇನಿಯಾದ ಕಿಲಿಮಂಜಾರೊ ಮೊದಲಾದ ಕಡೆ ಸಾಹಸಯಾತ್ರಿ ಮತ್ತು ಚಾರಣದಲ್ಲಿ ವ್ಯಾಪಕ ಅನುಭವ ಹೊಂದಿರುವ ಅತ್ಯಾಸಕ್ತಿಯ ಸಾಹಸ ಉತ್ಸಾಹಿ ಡಿಎಸ್‌ಡಿ ಸೋಲಂಕಿ ಮಾರ್ಗದರ್ಶನ ನೀಡಲಿದ್ದಾರೆ.
ಸಾಹಸಯಾತ್ರೆಯ ಮಾರ್ಗ:
ಆಯ್ಕೆಯಾದ ತಂಡವು ಡೆಹ್ರಾಡೂನ್ ಮೂಲಕ ಹರ್ಶಿಲ್ ಬೇಸ್ ಕ್ಯಾಂಪ್‌ಗೆ ಪ್ರಯಾಣಿಸುತ್ತದೆ. ತದನಂತರ ಲಾಲ್ ದೇವ್ಟಾ, ಕ್ಯಾರ್‌ಕೋಟಿ ಮೆಡೋಸ್ ಮತ್ತು ಅಂತಿಮವಾಗಿ ಮೇ 1 ರಂದು ಸಾಹಸಯಾತ್ರೆಯು ಲ್ಯಾಂಬ್ ತಲ್ ಮೂಲಕ ಸವಾಲಿನ ಚಾರಣವನ್ನು ಪ್ರಾರಂಭಿಸುತ್ತದೆ.
ಚಾರಣದ ಹೊರತಾಗಿ ಮಕ್ಕಳಿಗೆ ದೆಹಲಿ, ಆಗ್ರಾ, ಋಷಿಕೇಶ್, ಗಂಗೋತ್ರಿ ಮತ್ತು ಅಮೃತಸರದಂತಹ ಪ್ರಮುಖ ಸಾಂಸ್ಕೃತಿಕ ಮತ್ತು ಐತಿಹಾಸಿಕ ತಾಣಗಳಿಗೆ ಭೇಟಿ ನೀಡಲು ಅವಕಾಶ ಲಭಿಸುತ್ತದೆ.
ಈ ಯಾತ್ರೆಗೆ ಒಟ್ಟು 10 ಲಕ್ಷ ರೂ. ಅಂದಾಜು ವೆಚ್ಚವಾಗಲಿದ್ದು, ಲೇಡೀಸ್ ಸರ್ಕಲ್ ಇಂಡಿಯಾ, ದಿಯಾ ಫೌಂಡೇಷನ್ ಮತ್ತು ದಿ ಮೌಂಟೇನ್ ಗೋಟ್ ನೆರವು ನೀಡುತ್ತಿದೆ. ಫೆ 9ರಂದು ಗಂಗೋತ್ರಿ, ಬಯಲು ರಂಗಮಂದಿರದಲ್ಲಿ ಆಯ್ಕೆ ಪ್ರತಿಕ್ರಿಯೆ ನಡೆಯಲಿದ್ದು, ಆಸಕ್ತರು ಮೊ: 98860 14460 ಅಥವಾ ಮೊ: 98451 16835 ಅನ್ನು ಸಂಪರ್ಕಿಸಬಹುದು.
ಆತ್ಮವಿಶ್ವಾಸ ಬೆಳೆಯುತ್ತದೆ
ಅತ್ಯಂತ ಕಠಿಣ ಸವಾಲುಗಳನ್ನು ಎದುರಿಸಿದಾಗ ಆತ್ಮವಿಶ್ವಾಸ, ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬಹುದು ಎನ್ನುವ ನಾಯಕತ್ವ ಗುಣ ಬೆಳೆಯುತ್ತದೆ. ಹಾಗಾಗಿ ನಾನಾ ವರ್ಗದವರಿಗೆ 15 ವರ್ಷದಿಂದ ಪರ್ವತಾರೋಹಣ ಆಯೋಜಿಸಿಕೊಂಡು ಬರಲಾಗುತ್ತಿದೆ. ತಳಸ್ಥರದಲ್ಲಿರುವ ಪೌರಕಾರ್ಮಿಕರ ಮಕ್ಕಳಿಗೂ ಅಂತಹ ಅವಕಾಶ ದೊರೆಕಿಸಿಕೊಡುವುದು ನಮ್ಮ ಉದ್ದೇಶವಾಗಿದೆ.
ಡಿ.ಎಸ್.ಡಿ.ಸೋಲಂಕಿ
ಅಧ್ಯಕ್ಷರು, ಟೈಗರ್ ಅಡ್ವೆಂಚರ್ ಫೌಂಡೇಷನ್