ಆನೇಕಲ್: ಪೌರಕಾರ್ಮಿಕರ ಹಿತಕಾಯುವ ಕೆಲಸವನ್ನು ಮಾಡಿದಾಗ ಅವರು ಇನ್ನಷ್ಟು ಜವಾಬ್ದಾರಿಯಿಂದ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂದು ಆನೇಕಲ್ ಪುರಸಭೆ ಅಧ್ಯಕ್ಷ ಎನ್.ಎಸ್. ಪದ್ಮನಾಭ ಹೇಳಿದರು.
ಕರೊನಾ 2ನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆನೇಕಲ್ ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಸ್ನೇಹ ಸಿಂಡಿಕೇಟ್‌ನಿಂದ ಗುರುವಾರ ಮಾಸ್ಕ್ ವಿತರಿಸಿ ಮಾತನಾಡಿದರು.
ಪ್ರತಿದಿನ ಮನೆಮನೆಗಳ ಬಳಿ ತೆರಳಿ ಪೌರಕಾರ್ಮಿಕರು ಕಸವನ್ನು ಸಂಗ್ರಹಿಸುತ್ತಾರೆ. ಇವರ ಆರೋಗ್ಯದ ಕಾಳಜಿ ನಮ್ಮೆಲ್ಲರ ಜವಾಬ್ದಾರಿ. ಸ್ನೇಹ ಸಿಂಡಿಕೇಟ್ ಮುಂಜಾಗ್ರತಾ ಕ್ರಮವಾಗಿ ಪೌರಕಾರ್ಮಿಕರ ಸಹಕಾರಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದರು.
ಸ್ನೇಹ ಸಿಂಡಿಕೇಟ್ ಸಂಸ್ಥೆಯ ಅಧ್ಯಕ್ಷ ಬಿ.ಪಿ. ಮರಿಯಪ್ಪ ಮಾತನಾಡಿ, ಸ್ನೇಹ ಸಿಂಡಿಕೇಟ್‌ನ ಎಲ್ಲ ಸದಸ್ಯರ ಸಹಭಾಗಿತ್ವದಲ್ಲಿ ಕರೊನಾ ಪ್ರಾರಂಭವಾದಾಗ ಪೌರಕಾರ್ಮಿಕರ ಸಹಕಾರಕ್ಕೆ ಸಂಸ್ಥೆ ನಿಂತಿತ್ತು. ಅದರಂತೆ ಈ ಬಾರಿಯೂ ಕರೊನಾ ಮಹಾಮಾರಿ ಯಾರಿಗೂ ತೊಂದರೆ ನೀಡದಿರಲಿ ಎಂಬ ಕಾರಣಕ್ಕೆ ಪ್ರತಿಯೊಬ್ಬ ಪೌರಕಾರ್ಮಿಕರಿಗೆ ಮಾಸ್ಕ್ ನೀಡಲಾಗುತ್ತಿದೆ ಎಂದರು.
ಕರೊನಾ ಎರಡನೇ ಅಲೆ ಹೆಚ್ಚಾಗುತ್ತಿದೆ. ಆದ್ದರಿಂದ ಜನರು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವಾಗ ಮಾಸ್ಕ್ ಧರಿಸಬೇಕು. ಮಾರುಕಟ್ಟೆಗಳಲ್ಲಿ ತರಕಾರಿ ಖರೀದಿ ಮಾಡುವಾಗ ಗುಂಪುಗೂಡಬಾರದು. ಮಕ್ಕಳು ಹಾಗೂ ವೃದ್ಧರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
ಕೇವಲ ಭಾಷಣಗಳನ್ನು ಮಾಡುವುದರಿಂದ ಸುರಕ್ಷತೆಗೆ ಆದ್ಯತೆ ನೀಡಲು ಸಾಧ್ಯವಿಲ್ಲ. ಪ್ರತಿದಿನ ಮನೆಯಿಂದ ಹೊರಬರುವಾಗ ಮಾಸ್ಕ್ ಧರಿಸಿ ಬರಬೇಕು. ಆಗಾಗ್ಗೆ ಸ್ಯಾನಿಟೈಸರ್ ಬಳಸಿ ಕೈ ಸ್ವಚ್ಛಗೊಳಿಸಬೇಕು. ಪೊಲೀಸರು ಹಾಗೂ ಅಧಿಕಾರಿಗಳು ಹೇಳಿದ ಬಳಿಕ ಎಚ್ಚೆತ್ತುಕೊಳ್ಳುವ ಬದಲು ಸ್ವತಃ ನಾವೇ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ಸಾಹಿತಿ ಹಾಗೂ ಸ್ನೇಹಿ ಸಿಂಡಿಕೇಟ್ ಪ್ರಧಾನ ಪೋಷಕ ಅದೂರು ಪ್ರಕಾಶ್ ಹೇಳಿದರು.
ಸ್ನೇಹ ಸಿಂಡಿಕೇಟ್‌ನ ಗೌರವ ಅಧ್ಯಕ್ಷ ಮಹದೇವಪ್ಪ ಶೆಟ್ಟಿ, ಸದಸ್ಯ ಕುಚೇಲಯ್ಯ ಮತ್ತಿತರರು ಇದ್ದರು.