ಜಿಲ್ಲೆ

ಪೌರಕಾರ್ಮಿಕನ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡುವಂತೆ ಆಗ್ರಹ

ಮೈಸೂರು: ಕಾಲು ಕಳೆದುಕೊಂಡಿರುವ ಪೌರಕಾರ್ಮಿಕ ಮಹದೇವ ಅವರಿಗೆ ಪಾಲಿಕೆ ವತಿಯಿಂದ 25 ಲಕ್ಷ ರೂ. ಪರಿಹಾರ ನೀಡಬೇಕು. ಅವರ ಪತ್ನಿಗೆ ಉದ್ಯೋಗ ನೀಡಬೇಕು ಎಂದು ಮೈಸೂರು ನಗರಪಾಲಿಕೆ ಕಾಯಂ ಹಾಗೂ ಗುತ್ತಿಗೆ ಪೌರಕಾರ್ಮಿಕರ ಮಹಾಸಂಘ ಆಗ್ರಹಿಸಿದೆ.


ಕರ್ತವ್ಯನಿರತರಾಗಿದ್ದ ವೇಳೆ ಕಾರೊಂದು ಬಂದು ಗುದ್ದಿದ ಕಾರಣ ಒಂದು ಕಾಲನ್ನು ಪೂರ್ಣವಾಗಿ ಹಾಗೂ ಮತ್ತೊಂದು ಕಾಲನ್ನು ಭಾಗಶಃ ಕಳೆದುಕೊಂಡಿದ್ದು, ಗಾಯಾಳು ಆಗಿರುವ ಇವರಿಗೆ ಪತ್ನಿ, ಮೂವರು ಚಿಕ್ಕ ಮಕ್ಕಳು ಇದ್ದಾರೆ. ಆದ್ದರಿಂದ ಪರಿಹಾರ ಮತ್ತು ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡಬೇಕು ಎಂದು ಸಂಘದ ಅಧ್ಯಕ್ಷ ಎನ್. ಮಾರ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.


ಅಪಘಾತ ನಡೆದ ಕೂಡಲೇ ಪಾಲಿಕೆ ಆಯುಕ್ತರು, ಆರೋಗ್ಯಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದು, ಇವರಿಗೆ ಸಂಘ ಧನ್ಯವಾದ ಸಲ್ಲಿಸುತ್ತದೆ ಎಂದರು.


ಪಾಲಿಕೆಯು ಪೌರಕಾರ್ಮಿಕರಿಗೆ ಮಾಸಿಕ ಎರಡು ಸಾವಿರ ರೂ. ಸಂಕಷ್ಟಭತ್ಯೆ ನೀಡಲು ವಿಳಂಬ ಮಾಡುತ್ತಿರುವುದು ಸರಿಯಲ್ಲ. ಹೀಗಾಗಿ ಈ ಬಗ್ಗೆ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು. ಸಂಘದ ಮುಖಂಡರಾದ ಎಂ.ವಡಿವೇಲು, ಶ್ರೀನಿವಾಸ, ಎಂ.ವಿ.ವೆಂಕಟೇಶ್, ನರಸಿಂಹ ಇನ್ನಿತರರು ಇದ್ದರು.