ಶಿರಸಿ: ನಿತ್ಯ ನಸುಕಿನಲ್ಲಿ ನಗರ ಸ್ವಚ್ಛಗೊಳಿಸುವ ಪೌರಕಾರ್ವಿುಕರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ನಗರಸಭೆ ಕೈಗೆತ್ತಿಕೊಂಡಿರುವ ವಸತಿ ನಿರ್ಮಾಣ ಯೋಜನೆ ಕುಂಟುತ್ತ ಸಾಗಿದೆ. ಹೀಗಾಗಿ, ಪೌರ ಕಾರ್ವಿುಕರಿಗೆ ಸೂರು ಭಾಗ್ಯ ಮರೀಚಿಕೆಯಾಗತೊಡಗಿದೆ.
ಗೃಹ ಭಾಗ್ಯ ಯೋಜನೆಯಡಿ ಮೊದಲ ಹಂತದಲ್ಲಿ 750 ಚದರ ಅಡಿಯಲ್ಲಿ ಆರು ವಸತಿ ಗೃಹ ನಿರ್ವಣಕ್ಕೆ ನಗರಸಭೆಯು 45 ಲಕ್ಷ ರೂ. ನಿಗದಿಪಡಿಸಿತ್ತು. 2017ರ ಅಕ್ಟೋಬರ್ನಲ್ಲಿ ಇಲ್ಲಿನ ಮರಾಠಿಕೊಪ್ಪದಲ್ಲಿ ಕಾಮಗಾರಿಯ ಭೂಮಿ ಪೂಜೆ ನಡೆಸಿ, ಕಟ್ಟಡ ಪೂರ್ಣಗೊಳ್ಳಲು ಮಳೆಗಾಲ ಹೊರತುಪಡಿಸಿ, ಒಂಬತ್ತು ತಿಂಗಳು ಕಾಲಾವಕಾಶವನ್ನು ಗುತ್ತಿಗೆದಾರರಿಗೆ ನೀಡಲಾಗಿತ್ತು. ಆದರೆ, ಮೂರು ವರ್ಷ ಕಳೆದರೂ ಇನ್ನೂ ಕಟ್ಟಡ ಹಸ್ತಾಂತರಿಸುವ ಕಾರ್ಯವಾಗಿಲ್ಲ. ಪ್ರತಿ ಮನೆಗೆ ಹಾಲ್, ಅಡುಗೆ ಮನೆ, ಒಂದು ಕೊಠಡಿ, ಶೌಚಗೃಹ ನಿರ್ವಿುಸಲಾಗಿದೆ. ಕಟ್ಟಡದ ಕಾಂಕ್ರೀಟ್ ಕೆಲಸ ಮಾತ್ರ ಆಗಿದ್ದು, ಇನ್ನುಳಿದ ಕಾಮಗಾರಿ ಆಗಬೇಕಾಗಿದೆ.
ಗುತ್ತಿಗೆದಾರರ ನಿರ್ಲಕ್ಷ: ಗೃಹ ಭಾಗ್ಯ ಯೋಜನೆಯಡಿ ಒಬ್ಬ ಪೌರ ಕಾರ್ವಿುಕರಿಗೆ 7.5 ಲಕ್ಷ ರೂಪಾಯಿಯ ಅನುದಾನ ನಿಗದಿಪಡಿಸಲಾಗಿದೆ. ಈ ಯೋಜನೆಯಲ್ಲಿ ಆರು ಮನೆಗಳುಳ್ಳ ವಸತಿ ಸಮುಚ್ಚಯವೊಂದನ್ನು ನಿರ್ವಿುಸಲಾಗುತ್ತಿದೆ. ಆದರೆ, ಯೋಜನೆ ರೂಪಿಸಿದವರು, ಗುತ್ತಿಗೆದಾರರ ನಿರ್ಲಕ್ಷ್ಯದಿಂದ ವಿಳಂಬವಾಗಿದ್ದು, ಕಟ್ಟಡ ಪೂರ್ಣಗೊಳ್ಳಲು ಹೆಚ್ಚುವರಿಯಾಗಿ 25 ಲಕ್ಷ ರೂ. ಅನುದಾನ ಬೇಕಾಗಿದೆ. ಪೌರ ಕಾರ್ವಿುಕರಿಗೆ ಜಿಲ್ಲೆಯಲ್ಲಿ ಮೊದಲ ಬಾರಿಗೆ ವಸತಿ ಗೃಹ ಯೋಜನೆ ಶಿರಸಿಯಲ್ಲಿ ಅನುಷ್ಠಾನಗೊಂಡಿತ್ತು. ಇದರ ಭೂಮಿ ಪೂಜೆ ನಡೆದ ನಂತರ ಕಾರವಾರದಲ್ಲಿ ಕಾಮಗಾರಿ ಶುರುವಾಗಿದ್ದರೂ, ಅಲ್ಲಿನ ಕಟ್ಟಡ ಪೂರ್ಣಗೊಂಡು, ಪೌರ ಕಾರ್ವಿುಕರಿಗೆ ಅದನ್ನು ಹಸ್ತಾಂತರಿಸಲಾಗಿದೆ. ಆದರೆ, ಇಲ್ಲಿ ಮಾತ್ರ ಕಟ್ಟಡ ಕಾಮಗಾರಿ ಪೂರ್ಣವಾಗಿಲ್ಲ ಎಂದು ಪೌರ ಕಾರ್ವಿುಕರು ಆರೋಪಿಸುತ್ತಾರೆ. ಈ ಕಾಮಗಾರಿಯನ್ನು ಇ-ಟೆಂಡರ್ ಮೂಲಕ ಗುತ್ತಿಗೆ ನೀಡಲಾಗಿತ್ತು. ನಿಗದಿತ ಮೊತ್ತದಲ್ಲಿ ಕಟ್ಟಡ ಪೂರ್ಣಗೊಂಡಿಲ್ಲ.
ಮತ್ತೊಂದು ಪ್ರಸ್ತಾವ: ಎಲ್ಲ ಪೌರ ಕಾರ್ವಿುಕರಿಗೂ ವಸತಿ ಒದಗಿಸುವ ಉದ್ದೇಶದಿಂದ 2.32 ಕೋಟಿ ರೂ. ವೆಚ್ಚದ ಮತ್ತೊಂದು ವಸತಿ ಯೋಜನೆಯ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ನಗರಾಡಳಿತದ ಅಧಿಕಾರಿಗಳು ಹೇಳುತ್ತಾರೆ.
ಪೌರ ಕಾರ್ವಿುಕರ ಮನೆ ನಿರ್ವಣಕ್ಕೆ 18 ಲಕ್ಷ ರೂಪಾಯಿ ಹೆಚ್ಚುವರಿ ಅನುದಾನ ಬಿಡುಗಡೆಯಾಗಿದೆ. ಜಿಲ್ಲಾಧಿಕಾರಿಗಳು ಇದಕ್ಕೆ ಒಪ್ಪಿಗೆ ನೀಡಿದ್ದು, ಮುಂದಿನ ವಾರ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಹೆಚ್ಚುವರಿ ಹಣದಲ್ಲಿ ಅಳಿದುಳಿದ ಕಾಮಗಾರಿಗಳು ನಡೆಯಲಿದ್ದು, ಶೀಘ್ರದಲ್ಲಿ ಮನೆಗಳನ್ನು ಹಸ್ತಾಂತರಿಸಲಾಗುವುದು. | ಎಸ್. ಉಮೇಶ ನಗರಸಭೆ ಎಇಇ