ಜಿಲ್ಲೆ

ಪೌರ ಕಾರ್ವಿುಕರ ನಿರಂತರ ಧರಣಿ

ಧಾರವಾಡ: ನೇರ ನೇಮಕಾತಿ, ನೇರ ವೇತನ ಪಾವತಿ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾ ಪ. ಜಾತಿ-ಪ. ಪಂಗಡಗಳ ಪೌರ ಕಾರ್ವಿುಕರ ಮತ್ತು ನೌಕರರ ಸಂಘದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರದಿಂದ ನಿರಂತರ ಪ್ರತಿಭಟನೆ ಪ್ರಾರಂಭಿಸಲಾಗಿದೆ.

ಈ ಹಿಂದೆ ಪೌರ ಕಾರ್ವಿುಕರು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಒಂದು ವಾರದಲ್ಲೇ ಬೇಡಿಕೆ ಈಡೇರಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದರು. ಆದರೆ, ಈವರೆಗೂ ಈಡೇರಿಸದ ಹಿನ್ನೆಲೆಯಲ್ಲಿ ಮತ್ತೆ ಧರಣಿ ಪ್ರಾರಂಭಿಸಿದ್ದು, ಮೊದಲ ದಿನ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ನೇರ ನೇಮಕಾತಿ, ನೇರ ವೇತನ ನೀಡುವಂತೆ ಪಾಲಿಕೆ ಆಯುಕ್ತರಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಆದರೆ, ಪಾಲಿಕೆ ಮಾತ್ರ 134 ಜನ ಪೌರ ಕಾರ್ವಿುಕರ ನೇರ ನೇಮಕಾತಿ ಹಾಗೂ ನೇರ ವೇತನ ಪಾವತಿ ಜಾರಿಗೊಳಿಸಲು ವಿಳಂಬ ಮಾಡುತ್ತಿದೆ ಎಂದು ದೂರಿದರು. 4 ವರ್ಷಗಳಿಂದ ಪಾಲಿಕೆಯಲ್ಲಿ ವಾಹನ ಚಾಲಕರಾಗಿ ಕೆಲಸ ನಿರ್ವಹಿಸುತ್ತಿರುವ ಕಾರ್ವಿುಕರಿಗೆ ಕನಿಷ್ಠ ವೇತನ, ಇಎಸ್​ಐ, ಪಿಎಫ್, ವಿವಿಧ ಕಾರ್ವಿುಕ ಕಾಯ್ದೆ ಸೌಲಭ್ಯ ನೀಡುತ್ತಿಲ್ಲ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲು ತೆರಳಿದ್ದ ವಾಹನ ಚಾಲಕರನ್ನು ಕೆಲಸದಿಂದ ತೆಗೆಯಲಾಗಿದೆ. ಕೂಡಲೆ ಅವರನ್ನು ಮರಳಿ ಕೆಲಸಕ್ಕೆ ಹಾಜರುಪಡಿಸುವುದರ ಜತೆಗೆ ವೇತನ ಬಾಕಿ ಸೇರಿ ಎಲ್ಲ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.

ಈ ಬಾರಿ ನಮ್ಮ ಬೇಡಿಕೆ ಈಡೇರುವವರೆಗೂ ಧರಣಿ ನಡೆಯಲಿದೆ ಎಂದು ಎಚ್ಚರಿಸಿದರು. ಸಂಘದ ಜಿಲ್ಲಾಧ್ಯಕ್ಷ ಡಾ. ವಿಜಯ ಗುಂಟ್ರಾಳ, ಗಂಗಮ್ಮ ಸಿದ್ರಾಮಪುರ, ನಾಗಮ್ಮ ಗೊಲ್ಲರ, ಕನಕಪ್ಪ ಕೊಟಬಾಗಿ, ಚಂದ್ರು ಶಿರಗುಪ್ಪಿ, ಮಂಜುನಾಥ ಮಬ್ಬು, ರಘು ಹೆಬ್ಬಳ್ಳಿ, ಮಂಜುನಾಥ ಇದ್ದರು.</