ಚಿತ್ರದುರ್ಗ: ನಿತ್ಯ ನಗರ ಸ್ವಚ್ಛತೆಯಲ್ಲಿ ತೊಡಗುವ ಪೌರ ಕಾರ್ಮಿಕರೂ ಶುದ್ಧ ನೀರನ್ನೇ ಸೇವಿಸಬೇಕು ಎಂದು ನಗರಸಭೆ ಅಧ್ಯಕ್ಷೆ ಸುಮಿತಾ ಸಲಹೆ ನೀಡಿದರು.
ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿ ಗುರುವಾರ ಪೌರ ಕಾರ್ಮಿಕರಿಗೆ ಕಾಪರ್ ನೀರಿನ ಬಾಟಲ್‌ಗಳನ್ನು ವಿತರಿಸಿ ಮಾತನಾಡಿದರು.
ಮನೆಯಿಂದ ಬೆಳಗ್ಗೆ ಹೊರಡುವಾಗ ಕಾಪರ್ ಬಾಟಲಿಗಳಲ್ಲಿ ಬಿಸಿ ಅಥವಾ ತಣ್ಣನೆಯ ನೀರನ್ನು ತುಂಬಿಸಿಕೊಂಡು ಬನ್ನಿ. ಉಪಹಾರದ ನಂತರ ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ಕುಡಿಯುವುದನ್ನು ತಪ್ಪಿಸಿ, ಆರೋಗ್ಯ ರಕ್ಷಿಸಿಕೊಳ್ಳಿ. ಇದರಿಂದ ಕಿಡ್ನಿ ಇನ್ನಿತರೆ ಅಂಗಾಂಗ ಸಮಸ್ಯೆ ಉಂಟಾಗುವುದಿಲ್ಲ ಎಂದು ಹೇಳಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಸರುಲ್ಲಾ ಮಾತನಾಡಿ, ಪೌರ ಕಾರ್ಮಿಕರ ಆರೋಗ್ಯ ದೃಷ್ಟಿಯಿಂದ ಇವುಗಳನ್ನು ವಿತರಿಸಲಾಗುತ್ತಿದೆ. ಎಲ್ಲೆಂದರಲ್ಲಿ ಸಿಗುವ ನೀರನ್ನು ಸೇವಿಸಿ ಆರೋಗ್ಯ ಹದಗೆಡಿಸಿಕೊಳ್ಳಬೇಡಿ ಎಂದು ಸಲಹೆ ನೀಡಿದರು.
ಆರೋಗ್ಯ ನಿರೀಕ್ಷಕರಾದ ನಿರ್ಮಲಾ, ಹೀನಾ ಕೌಸರ್, ರುಕ್ಮಿಣಿ, ಭಾರತಿ, ಬಾಬುರೆಡ್ಡಿ ಇತರರಿದ್ದರು.