ಜಿಲ್ಲೆ

ಪೌರ ಕಾರ್ಮಿಕರಿಗೆ ಆದೇಶ ಪತ್ರ ನೀಡಿ

ಕಲಬುರಗಿ: ನಗರದಲ್ಲಿ ಹಲವು ವರ್ಷದಿಂದ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರ ಹುದ್ದೆಗಳಿಗೆ ೨೦೧೮ರಲ್ಲಿ ಅರ್ಜಿ ಆಹ್ವಾನಿಸಿ, ನೇಮಕವಾದ ನೇರ ನೇಮಕ ಮತ್ತು ನೇರ ಪಾವತಿ ಅಡಿ ನೇಮಕವಾದ ಕಾರ್ಮಿಕರಿಗೆ ಆದೇಶ ಪತ್ರ ನೀಡಬೇಕು ಎಂದು ನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ಜಿಲ್ಲಾಧ್ಯಕ್ಷ ಶರಣು ಅತನೂರ ಆಗ್ರಹಿಸಿದರು.
೨೦೧೮ರಲ್ಲಿ ೧೨೦೦ಕ್ಕೂ ಹೆಚ್ಚು ಜನ ಕಾರ್ಮಿಕರು ಅರ್ಜಿ ಹಾಕಿದ್ದರು. ಅದರಲ್ಲಿ ೧೩೨ ಕಾರ್ಮಿಕರು ನೇರ ನೇಮಕವಾಗಿದ್ದು, ೩೭೬ ಪೌರ ಕಾರ್ಮಿಕರು ನೇರ ಪಾವತಿ ಅಡಿ ನೇಮಕವಾಗಿದ್ದು, ೨೦೨೧ರಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ಮಾಡಲಾಗಿತ್ತು. ಸುಮಾರು ನಾಲ್ಕು ವರ್ಷವಾದರೂ ಇದುವರೆಗೆ ಆದೇಶ ಪತ್ರ ನೀಡಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
ಆಯ್ಕೆಯಾದ ಪೌರಕಾರ್ಮಿಕರಿಗೆ ೨೦೨೩ ಫೆ.೨ರಂದು ನ್ಯಾಯ ಒದಗಿಸುವಂತೆ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಪತ್ರ ಬರೆದು, ಆದೇಶ ನೀಡುವಂತೆ ನಿರ್ದೇಶಿಸಿದ್ದರು. ೨೦೨೩ ಜು.೧೦ರಂದು ಪುನಃ ಪತ್ರವನ್ನು ಜಿಲ್ಲಾಧಿಕಾರಿಗೆ ಬರೆದು, ಖಾಲಿ ಪೌರ ಕಾರ್ಮಿಕರ ಹುದ್ದೆ ಭರ್ತಿಗೆ ಕೋರಿದ್ದರು. ಆದರೆ ಜಿಲ್ಲಾಧಿಕಾರಿ ಇದುವರೆಗೆ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.
ನಗರದ ಸ್ವಚ್ಛತೆಗೆ ಹಗಲಿರುಳು ದುಡಿಯುವ ಪೌರ ಕಾರ್ಮಿಕರಿಗೆ ಸರಿಯಾಗಿ ವೇತನ ನೀಡುತ್ತಿಲ್ಲ, ಉದ್ಯೋಗ ಭದ್ರತೆಯೂ ಇಲ್ಲ. ನಿತ್ಯ ಸಂಕಷ್ಟದ ಜೀವನ ಸಾಗಿಸುತ್ತಿz್ದೆÃವೆ. ಈಗಾಗಲೇ ಆಯ್ಕೆಯಾದ ಪೌರ ಕಾರ್ಮಿಕರಲ್ಲಿ ಕೆಲವರು ನಿಧನ ಹೊಂದಿದ್ದಾರೆ. ಮೃತರ ಕುಟುಂಬ ಬೀದಿಗೆ ಬಿದ್ದಿವೆ. ವಯೋಮಿತಿ ಮೀರುತ್ತಿದ್ದು, ಆತಂಕದ ದಿನಗಳನ್ನು ದೂಡುತ್ತಿದ್ದಾರೆ. ನೇಮಕ ಆದೇಶ ಸಿಗದೆ ಜೀವನ ದುಸ್ತರವಾಗಿದೆ ಎಂದು ಅಳಲು ತೋಡಿಕೊಂಡರು.
ಪ್ರಮುಖರಾದ ಅನೀಲ ಚಕ್ರ, ವಿಜಯಕುಮಾರ ಕುಸನೂರ, ಪ್ರೇಮಕುಮಾರ ಶೀಲ್ಡ್, ಅರುಣ ಸುತಾರ, ಪ್ರದೀಪ ಬೋರಾಳಕರ್, ಪ್ರಮೋದ ದೇವಳಗುಡ್ಡ, ಬಂದೇನವಾಜ್, ಅವಿನಾಶ ಕಪನೂರ ಇತರರಿದ್ದರು.