ಜಿಲ್ಲೆ

ಪೌರ ಕಾರ್ಮಿಕರನ್ನು ಗೌರವದಿಂದ ಕಾಣಿ

ಬಾಗಲಕೋಟೆ: ತುಳಸಿ ವಿವಾಹ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಕ್ಷಿತಾ ಭರತಕುಮಾರ ಈಟಿ ತಮ್ಮ ಎಂ.ಎಸ್‌.ಈಟಿ ಫೌಂಡೇಶನ್ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಮಹಿಳಾ ಪೌರ ಕಾರ್ಮಿಕರಿಗೆ ಸೀರೆ ನೀಡಿ ಉಡಿ ತುಂಬಿ , ಆರುತಿ ಮಾಡಿ ಗೌರವಿಸಿದರು. ಪುರುಷ ಕಾರ್ಮಿಕರಿಗೆ ಬಟ್ಟೆ ವಿತರಿಸಿದರು.

ತಮ್ಮ ನಿವಾಸದಲ್ಲಿ ಶುಕ್ರವಾರ ತುಳಸಿ ವಿವಾಹ ನೆರವೇರಿಸಿದ ಬಳಿಕ ಪೌರ ಕಾರ್ಮಿಕರನ್ನು ಗೌರವಿಸಿ ಮಾತನಾಡಿದ ಅವರು, ಪೌರ ಕಾರ್ಮಿಕರು ಶ್ರಮ ಜೀವಿಗಳು. ಜನರ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಕಷ್ಟ, ಸಂಕಷ್ಟಗಳಿಗೆ ಪ್ರತಿಯೊಬ್ಬರು ಸ್ಪಂದಿಸಬೇಕು ಎಂದರು.
ವೃತ್ತಿಯಿಂದ ಯಾರು ದೊಡ್ಡವರು, ಸಣ್ಣವರು ಆಗುವುದಿಲ್ಲ. ಘನತೆ, ವ್ಯಕ್ತಿತ್ವದಿಂದ ಬೆಳೆಯಬೇಕು. ಪೌರ ಕಾರ್ಮಿಕರು ಜೀವದ ಹಂಗು ತೊರೆದು ಕೆಲಸ ಮಾಡುತ್ತಾರೆ. ಕೋವಿಡ್ ಸಂದರ್ಭಗಳಲ್ಲಿ ಅವರು ನಿರ್ವಹಿಸಿದ ಪಾತ್ರ ಮರೆಯಲಾಗದು‌. ಪೌರ ಕಾರ್ಮಿಕರನ್ನು ಗೌರವದಿಂದ ಕಾಣಬೇಕು ಎಂದು ಹೇಳಿದರು.

ಪೌರ ಕಾರ್ಮಿಕರ ಕಷ್ಟ, ಸವಾಲು ಅರಿತು ಕೊಂಡಿದ್ದೇನೆ‌. ಸರ್ಕಾರಕ್ಕೆ ತಮ್ಮ ಬೇಡಿಕೆ ಬಗ್ಗೆ ಗಮನ ಸೆಳೆಯಲಾಗುವುದು. ಸುರಕ್ಷಾ ಕ್ರಮಗಳನ್ನು ಅನುಸರಿಸಿ ಕೆಲಸ ಮಾಡಿ ಎಂದು ಕಿವಿ ಮಾತು ಹೇಳಿದರು.