ಅರಸೀಕೆರೆ: ಪೌರ ಕಾರ್ಮಿಕರ ಹಿತಕಾಯಲು ಸರ್ಕಾರ ಬದ್ಧವಿದೆ ಎಂದು ನಗರಸಭೆ ಅಧ್ಯಕ್ಷ ಸಿ.ಗಿರೀಶ್ ಹೇಳಿದರು.
ನಗರಸಭೆ ಕಚೇರಿ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ನಗರ ಸೌಂದರ್ಯ ಕಾಪಾಡುವ ಗುರುತರ ಹೊಣೆಗಾರಿಕೆ ಹೊಂದಿರುವ ದುಡಿಯುವ ವರ್ಗವನ್ನು ಪರಿಗಣಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ದುಡಿಯುತ್ತಿರುವ ಪೌರಕಾರ್ಮಿರ ಸೇವೆಯನ್ನು ಖಾಯಂಗೊಳಿಸುವುದಾಗಿ ಭರವಸೆ ನೀಡಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ನಗರಸಭೆ ವತಿಯಿಂದ ಎಲ್ಲರಿಗೂ ಸೂರು ಕಲ್ಪಿಸಬೇಕು ಎನ್ನುವ ಉದ್ದೇಶದಿಂದ 2 ಎಕರೆ ಭೂಮಿ ಮಂಜೂರಾಗಿದ್ದು, ಅನುಮೋದನೆ ಪಡೆದ ಕೂಡಲೇ ಮನೆಗಳ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು. ಕರೊನಾ ಸಂಕಷ್ಟ ಕಾಲದಲ್ಲಿ ಜೀವ ಪಣಕ್ಕಿಟ್ಟು ಮಾಡಿದ ಸೇವೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಆರೋಗ್ಯ ರಕ್ಷಣೆ ದೃಷ್ಟಿಯಿಂದ ಪ್ರತಿಯೊಬ್ಬ ಪೌರ ಕಾರ್ಮಿಕನೂ ಗ್ಲೌಸ್, ಶೂ ಬಳಕೆ ಮಾಡಬೇಕು. ಜತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಉನ್ನತ ಹುದ್ದೆಗೇರಲು ನೆರವಾದರೆ ನಿಮ್ಮಗಳ ಸೇವೆ ಸಾರ್ಥಕವಾಗಲಿದೆ. ಪ್ರತಿ ತಿಂಗಳು 10ನೇ ತಾರೀಖು ಸಂಬಳ ದೊರೆಯುವಂತೆ ಮಾಡಲಿದ್ದೇನೆ ಎಂದು ಭರವಸೆ ನೀಡಿದರು.
ಉಪಾಧ್ಯಕ್ಷ ಕಾಂತೇಶ್, ಸದಸ್ಯರಾದ ಜಿ.ಟಿ. ಗಣೇಶ್, ಈಶಣ್ಣ, ಶ್ವೇತಾ ರಮೇಶ್, ಅನ್ನಪೂರ್ಣ, ಸುಜಾತಾ ರಮೇಶ್, ಪ್ರೇಮಾ ಮಲ್ಲಿಕಾರ್ಜುನ್, ಭಾಸ್ಕರ್, ಮುಖಂಡ ಮನೋಜ್ ಕುಮಾರ್, ಧರ್ಮ ಇನ್ನಿತರರು ಮಾತನಾಡಿದರು.
ಸದಸ್ಯರಾದ ಮೇಲುಗಿರಿಗೌಡ, ನಗರಸಭೆ ಸಿಬ್ಬಂದಿ ಹಾಜರಿದ್ದರು. ಹಿರಿಯ ಆರೋಗ್ಯ ನಿರೀಕ್ಷಕರಾದ ರೇವಣ್ಣ, ಪ್ರಸನ್ನಕುಮಾರ್, ಲಿಂಗರಾಜ್ ಹಾಗೂ ಎಲ್ಲ ಪೌರ ಕಾರ್ಮಿಕರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.