ಎನ್.ಆರ್.ಪುರ ಪಪಂನಲ್ಲಿ ಪೌರ ಕಾರ್ಮಿಕರ ದಂಪತಿಗಳನ್ನು ಗೌರವಿಸಲಾಯಿತು. ಜುಬೇದಾ, ಪ್ರಶಾಂತ್ ಎಲ್. ಶೆಟ್ಟಿ, ಉಮಾಕೇಶವ್, ಆರ್.ಕುಮಾರಸ್ವಾಮಿ, ಮುಕುಂದ, ಸೈಯದ್‌ವಸೀಂ, ರೀನಾ, ರೇಖಾ ಇತರರಿದ್ದರು. 
ಜಿಲ್ಲೆ

ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸಲು ಚಿಂತನೆ

ಎನ್.ಆರ್.ಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಎರಡು ಬಾರಿ ಪೌರ ಕಾರ್ಮಿಕರ ಸೇವೆಯನ್ನು ಕಾಯಂ ಮಾಡಿದೆ. ಉಳಿದ ಪೌರ ಕಾರ್ಮಿಕರ ಸೇವೆಯನ್ನು ಕಾಯಂ ಮಾಡುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಯುತ್ತಿದೆ ಎಂದು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್.ಶೆಟ್ಟಿ ಹೇಳಿದರು.

ಪಪಂನಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿ, ಪೌರ ಕಾರ್ಮಿಕರಿಗೆ ರಾಜೀವ್ ಗಾಂಧಿ ವಸತಿ ನಿಗಮದ ಮುಖಾಂತರ 7.50 ಲಕ್ಷ ರೂ. ಗಹಭಾಗ್ಯ ಯೋಜನೆಯ ಸೌಲಭ್ಯ ದೊರಕಿಸಿಕೊಡುವಂತೆ ಸರ್ಕಾರ ಮಟ್ಟದಲ್ಲಿ ಪ್ರಯತ್ನಿಸಲಾಗುವುದು ಎಂದರು.

ಪಪಂ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್ ಮಾತನಾಡಿ, ಆಶ್ರಯ ಬಡಾವಣೆಗಳಲ್ಲಿ ಪೌರ ಕಾರ್ಮಿಕರಿಗೆ ನಿವೇಶನ ಮೀಸಲಿಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪೌರಕಾರ್ಮಿಕರ ಮಕ್ಕಳ ವ್ಯಾಸಂಗಕ್ಕೆ ಅನುಕೂಲವಾಗುವಂತೆ ಉಚಿತ ಲ್ಯಾಪ್‌ಟಾಪ್ ವಿತರಣೆ ಯೋಜನೆಯನ್ನು ಸರ್ಕಾರ ರೂಪಿಸಿದೆ ಎಂದರು.

ಪಪಂ ಅಧ್ಯಕ್ಷೆ ಜುಬೇದಾ ಮಾತನಾಡಿ, ಪೌರಕಾರ್ಮಿಕರು ಸ್ವಚ್ಛತಾ ಯೋಧರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಸಮುಕ್ತ ನಗರಗಳಲ್ಲಿ ಎನ್.ಆರ್.ಪುರ ರಾಜ್ಯದಲ್ಲಿ 67ನೇ ಸ್ಥಾನ ಪಡೆದುಕೊಂಡಿದೆ ಎಂದು ತಿಳಿಸಿದರು.

ಪೌರಕಾರ್ಮಿಕ ದಂಪತಿಗಳನ್ನು ಸನ್ಮಾನಿಸಲಾಯಿತು. ಪೌರಕಾರ್ಮಿಕ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಆಟೋಟ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಪಪಂ ಉಪಾಧ್ಯಕ್ಷೆ ಉಮಾಕೇಶವ್, ಸದಸ್ಯರಾದ ಮುಕುಂದ, ಪಿ.ಜೆ.ಶೋಜಾ, ಆರ್.ಕುಮಾರಸ್ವಾಮಿ, ಸುರಯ್ಯಬಾನು, ರೇಖಾ, ರೀನಾ, ಸೈಯದ್‌ವಸೀಂ, ಪೌರ ನೌಕರರ ಸಂಘದ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷ ಶ್ರೀನಿವಾಸ್, ರಕ್ಷಿತಾ, ಲಕ್ಷಣ ಗೌಡ, ಚಂದ್ರಶೇಖರ್ ಇದ್ದರು.